ಚಿಕ್ಕೋಡಿ: ಮತದಾರರ ನೋಂದಣಿ ಪರಿಷ್ಕರಣೆಯನ್ನು 45 ದಿನಗಳ ಕಾಲ ದೃಢೀಕರಣ, ಸೇರ್ಪಡೆ, ತೆಗೆದು ಹಾಕುವಿಕೆ ಮತ್ತು ತಿದ್ದುಪಡಿ ಮಾಡಲಾಗುವುದು ಎಂದು ನೆರೆ ಹಾವಳಿ ವಿಶೇಷ ನೋಡಲ್ ಅಧಿಕಾರಿ ನಾಗನಗೌಡ ಪಾಟೀಲ ಹೇಳಿದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮತದಾರರ ಪಟ್ಟಿ ಪರಿಷ್ಕರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಂಬರುವ ಯಾವುದೇ ಚುನಾವಣೆಯಲ್ಲಿ ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು. ಅದಕ್ಕಾಗಿ ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 15 ವರೆಗೆ ವಿಶೇಷ ಅಭಿಯಾನದ ಮೂಲಕ ತಾಲೂಕಿನ ಬಿಎಲ್ಒಗಳಿಂದ ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯ ಪರಿಷ್ಕರಣಾ ಕಾರ್ಯಕ್ರಮದ ತರಬೇತಿ ನೀಡಲು ಸ್ವಿಪ್ ಕಮಿಟಿ ಮತ್ತು ತಾಲೂಕಾ ಆಡಳಿತ ವತಿಯಿಂದ ಮಾಡಲಾಗುವುದು ಎಂದು ತಿಳಿಸಿದರು.
ಭಾರತ ಚುನಾವಣಾ ಆಯೋಗದ ಪ್ರಕಾರ ಮತದಾರರ ನೋಂದಣಿ ಪರಿಷ್ಕರಣೆಯನ್ನು 45 ದಿನಗಳ ಕಾಲ ದೃಢೀಕರಣ, ಸೇರ್ಪಡೆ, ತೆಗೆದು ಹಾಕುವಿಕೆ ಮತ್ತು ತಿದ್ದುಪಡಿ ಮಾಡಲಾಗುತ್ತದೆ. ಹಾಗಾಗಿ ಸರ್ಕಾರ ನೀಡಿದ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಕಿರಣ ಬೆಳವಿ, ತಾಲೂಕು ಪಂಚಾಯತ್ ವ್ಯವಸ್ಥಾಪಕ ಆರ್ ಎ ಚಟ್ನಿ, ಕಂದಾಯ ಅಧಿಕಾರಿ ಪ್ರವೀಣ ಮಾಳಾಜ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.