ಬೆಳಗಾವಿ: ಡಿಸೆಂಬರ್ 19ರೊಳಗೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಣೆ ಮಾಡುವಂತೆ ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತೊಮ್ಮೆ ಆಗ್ರಹಿಸಿದ್ದಾರೆ.
ಡಿ.19ರೊಳಗೆ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆದು ಮೀಸಲಾತಿ ಘೋಷಣೆ ಮಾಡಬೇಕು. ಒಂದು ವೇಳೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಿಸದಿದ್ರೆ ಡಿ.22ರಂದು ವಿರಾಟ್ ಪಂಚಶಕ್ತಿ ಸಮಾವೇಶ ಮಾಡಲಾಗುವುದಾಗಿ ಸ್ವಾಮೀಜಿ ತಿಳಿಸಿದ್ದಾರೆ. ಮೀಸಲಾತಿ ಘೋಷಿಸಿದ್ರೂ, ಘೋಷಿಸದಿದ್ದರೂ 25 ಲಕ್ಷ ಪಂಚಮಸಾಲಿ ಸಮುದಾಯದ ಜನರ ಸೇರಿಸಲು ಸಿದ್ಧತೆ ನಡೆಸಲಾಗಿದ್ದು, ಸುವರ್ಣಸೌಧ ಬಳಿ ನೂರು ಎಕರೆ ಸ್ಥಳದಲ್ಲಿ ಪಂಚಮಸಾಲಿ ಸಮಾವೇಶಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮೀಸಲಾತಿ ನೀಡಿದರೇ ಡಿ.22ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸನ್ಮಾನ ಮಾಡಲಾಗುವುದು, ಇಲ್ಲವಾದಲ್ಲಿ ಡಿಸೆಂಬರ್ 22ರಂದು ಅಂತಿಮ ಹಂತದ ಹೋರಾಟ ನಡೆಸುವುದಾಗಿ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಡಿ. 19ರ ಸಂಜೆ ಸವದತ್ತಿಯಲ್ಲಿ ಪಂಚಮಸಾಲಿ ಸಮಾವೇಶ ನಡೆಯಲಿದ್ದು, ಅಂದೇ ಸವದತ್ತಿಯಿಂದ ಪಾದಯಾತ್ರೆ ಮೂಲಕ ಬೆಳಗಾವಿಯ ಸುವರ್ಣಸೌಧಕ್ಕೆ ಬರಲು ನಿರ್ಧರಿಸಿರುವುದಾಗಿ ಬಸವ ಜಯಮೃತ್ಯುಂಜಯ ಸ್ಚಾಮೀಜಿ ಹೇಳಿದ್ದಾರೆ.
ಡಿ.19ರ ರಾತ್ರಿಯಿಂದ ಡಿ.22ರ ಬೆಳಗ್ಗೆವರೆಗೆ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದ್ದು, ಈ ಮೂಲಕ ಸುವರ್ಣಸೌಧಕ್ಕೆ ಆಗಮಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ಡಿ.22ರಂದು 25 ಲಕ್ಷ ಜನರ ಸೇರಿಸಲು ತಯಾರಿ ನಡೆಸುತ್ತಿರುವುದಾಗಿ ಹೇಳಿದ ಅವರು, ಕಮಕಾರಟ್ಟಿ ಗ್ರಾಮದ ಬಳಿ 60 ಎಕರೆ ವಿಸ್ತೀರ್ಣದಲ್ಲಿರುವ ನಿರ್ಮಾಣ ಹಂತದ ರಾಘವೇಂದ್ರ ಬಡಾವಣೆಯಲ್ಲಿ ಸಮಾವೇಶಕ್ಕೆ ತಯಾರಿ ನಡೆಸಿದ್ದಾಗಿ ಮಾಹಿತಿ ನೀಡಿದ್ದಾರೆ.
ಇನ್ನು ವಿರಾಟ ಪಂಚಮಶಕ್ತಿ ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ಎಂ.ಬಿ.ಪಾಟೀಲ್, ಕಾರ್ಯಾಧ್ಯಕ್ಷರಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಕೋಶಾಧ್ಯಕ್ಷರಾಗಿ ಈರಣ್ಣ ಕಡಾಡಿ ಅವರನ್ನು ನೇಮಕ ಮಾಡಲಾಗಿದೆ. ಅಲ್ಲದೇ ಸಮುದಾಯದ ಹಾಲಿ ಮತ್ತು ಮಾಜಿ ಶಾಸಕರಿಗೆ ವಿವಿಧ ಜವಾಬ್ದಾರಿ ಹಂಚಿಕೆಗಳನ್ನು ಈಗಾಗಲೇ ನೀಡಲಾಗಿದೆ.
ಸಮಾವೇಶ ನಡೆಯುವ ಸ್ಥಳಕ್ಕೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಮಾವೇಶಕ್ಕೆ ಆಗಮಿಸಲಿರುವ ಜನರಿಗಾಗಿ ಊಟದ ವ್ಯವಸ್ಥೆಯನ್ನು ಮಾಡಲಾಗುವುದಾಗಿ ಅವರು ಇದೇ ಸಂದರ್ಭದಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ: ಡಿ.22ರಂದು ಪಂಚಮಸಾಲಿ ಮೀಸಲಾತಿ ಸಿಗುವ ಬಗ್ಗೆ ಸ್ಪಷ್ಟ ಚಿತ್ರಣ.. ಜಯಮೃತ್ಯುಂಜಯ ಶ್ರೀ