ಅಥಣಿ: ಸಾಮಾನ್ಯವಾಗಿ ದೇವಸ್ಥಾನ ಹಾಗೂ ಮನೆ ಗೃಹಪ್ರವೇಶದ ಸಮಯದಲ್ಲಿ ಹೋಮಗಳನ್ನು ಮಾಡುವುದಿದೆ. ಆದರೆ ಇಲ್ಲಿ ರಸ್ತೆ ಅಭಿವೃದ್ಧಿಗಾಗಿ ಹೋಮ ಮಾಡಲಾಗಿದೆ. ಕಳೆದ 18 ವರ್ಷಗಳಿಂದ ರಸ್ತೆ ನಿರ್ಮಾಣವಾಗದ ಕಾರಣಕ್ಕೆ ಆದಷ್ಟು ಬೇಗನೆ ರಸ್ತೆ ಅಭಿವೃದ್ಧಿ ಮಾಡಲು ಶಾಸಕ ಹಾಗೂ ಸರ್ಕಾರಕ್ಕೆ ಒಳ್ಳೆಯ ಬುದ್ಧಿ ನೀಡಪ್ಪಾ ದೇವರೇ ಎಂದು ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಮುಖಂಡರು ರಸ್ತೆ ಮಧ್ಯದಲ್ಲಿಯೇ ಹೋಮ ಮಾಡಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಿಂದ ಕೋಕಟನೂರ ಗ್ರಾಮದವರೆಗೆ ಸರಿಸುಮಾರು ಒಂಬತ್ತು ಕಿಲೋಮೀಟರ್ ರಸ್ತೆ ಕಳೆದ 18 ವರ್ಷದಿಂದ ಸಂಪೂರ್ಣವಾಗಿ ಹದಗೆಟ್ಟಿದ್ದು ವಾಹನ ಸವಾರರು, ಮಹಿಳೆಯರು, ರೋಗಿಗಳು ಹಾಗು ಶಾಲೆ ಮಕ್ಕಳು ಪ್ರತಿಕ್ಷಣವೂ ಸಂಕಷ್ಟ ಪಡುವಂತಾಗಿದೆ. ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಗಜಾನನ ಮಂಗಸೂಳಿ ಮಾತನಾಡಿ, 'ಅಥಣಿ ತಾಲೂಕಿನಲ್ಲಿ ಹಲವು ವರ್ಷಗಳಿಂದ ಸುಗಮ ಸಂಚಾರಕ್ಕೆ ರಸ್ತೆ ಇಲ್ಲದೆ ವಾಹನ ಸವಾರರು ಪರದಾಡುವಂತಾಗಿದೆ. ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಪ್ರತಿಶತ ಕಮಿಷನ್ನಲ್ಲಿ ಮುಳುಗಿದೆ. ಈ ಭಾಗದಲ್ಲಿ ರಸ್ತೆಗಳು ನಿರ್ಮಾಣವಾಗುತ್ತಿಲ್ಲ. ಅದಕ್ಕೆ ದೇವರು ಅವರಿಗೆ ಒಳ್ಳೆಯ ಬುದ್ಧಿ ನೀಡಲಿ ಎಂದು ರಸ್ತೆ ಮಧ್ಯದಲ್ಲಿ ಹೋಮ ಮಾಡಿದ್ದೇವೆ' ಎಂದು ಹೇಳಿದರು.
ಸುಟ್ಟಟ್ಟಿ ಗ್ರಾಮಸ್ಥ ಸಾಬು ಮಾಳಿ ಮಾತನಾಡಿ, 'ಸುಟ್ಟಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಹಲವು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರದ ಗಮನ ಸೆಳೆಯಲು ವಿನೂತನ ಪ್ರತಿಭಟನೆ ಮಾಡಿದ್ದೇವೆ' ಎಂದರು.
ಇದನ್ನೂ ಓದಿ: ಬೆಂಗಳೂರು: ಬಿದ್ದ ರಸ್ತೆ ಗುಂಡಿಯಲ್ಲೇ ಅರ್ಧ ದಿನ ಕುಳಿತು ಸವಾರ ಪ್ರತಿಭಟನೆ.. ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ