ಅಥಣಿ: ಕಳೆದೆರಡು ವಾರಗಳಿಂದ ಅಥಣಿ ತಾಲೂಕಿನ ಹಳ್ಳಿಗಳಲ್ಲಿ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದರಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಇನ್ನು ತಾಲೂಕಿನಲ್ಲಿ ಇಷ್ಟೆಲ್ಲಾ ಅವಾಂತರವಾಗುತ್ತಿದ್ದು, ಕೋವಿಡ್-19 ಟಾಸ್ಕ್ ಫೋರ್ಸ್ ಕಮಿಟಿ ಮಾತ್ರ ಭೇಟಿ ನೀಡಿಲ್ಲ. ಇದರಿಂದ ಕಮಿಟಿಯು ಪಟ್ಟಣಕ್ಕೆ ಮಾತ್ರ ಸಿಮೀತವಾಗಿದೆ ಅನ್ನೋದು ಗ್ರಾಮಸ್ಥರ ಆರೋಪ.
ಬೆಳಗಾವಿ ಜಿಲ್ಲೆಯಲ್ಲಿ ಅಥಣಿಯು ಹೆಚ್ಚಿನ ಗ್ರಾಮ ಹಾಗೂ ಜನಸಂಖ್ಯೆ ಹೊಂದಿರುವ ತಾಲೂಕು. ದಿನನಿತ್ಯ ಕೊರೊನಾ ಸೋಂಕಿತರ ಸಕ್ರಿಯ ಪ್ರಕರಣಗಳು ಹೆಚ್ಚಾಗುತ್ತಿದೆ. ಮಾರ್ಚ್ ತಿಂಗಳಿಂದ ಮೇ 12ವರೆಗೆ ಅಥಣಿಯಲ್ಲಿ 1170 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 64 ಜನರು ಸಾವನ್ನಪ್ಪಿದ್ದಾರೆ.
ಗ್ರಾಮೀಣ ಭಾಗದಲ್ಲಿ ಕೊರೊನಾ ಭಯದಿಂದಾಗಿ ಕೆಲವು ರೋಗಿಗಳು ಆಸ್ಪತ್ರೆಗೆ ಹೋಗುತ್ತಿಲ್ಲ. ಇದರಿಂದ ದಿನನಿತ್ಯ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದೆ. ಕೆಲವು ಗ್ರಾಮದಲ್ಲಿ ಒಂದೇ ವಾರದಲ್ಲಿ ಹತ್ತಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ತಾಲೂಕಿನಲ್ಲಿ ಈ ರೀತಿಯ ಸಮಸ್ಯೆ ಇದ್ದರೂ ಸಹ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಇಲ್ಲಿಗೆ ಭೇಟಿ ನೀಡುತ್ತಿಲ್ಲವೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಈ ಬಗ್ಗೆ ಮಾತನಾಡಿದ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ, ಸದ್ಯ ಗ್ರಾಮ ಮಟ್ಟದಲ್ಲಿ ಕೋವಿಡ್ ಟಾಸ್ಕ್ ಫೋರ್ಸ್ ಕಮಿಟಿ ರಚಿಸಲಾಗಿದೆ. ನಾವು ಕೆಲವು ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೇವೆ ಎಂದು ತಿಳಿಸಿದರು.