ಜೈಪುರ್ (ರಾಜಸ್ಥಾನ): ರಿಯಾ ಸಿಂಘಾ 2024ರ ವಿಶ್ವ ಸುಂದರಿ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು, ಜಾಗತಿಕ ವಿಶ್ವ ಸುಂದರಿ 2024 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಭಾನುವಾರ ಗ್ರ್ಯಾಂಡ್ ಫಿನಾಲೆ ನಡೆದಿದ್ದು, ಪ್ರತಿಷ್ಠಿತ ಪ್ರಶಸ್ತಿಯನ್ನು ರಿಯಾ ಸಿಂಘಾ ಗೆದ್ದುಕೊಂಡಿದ್ದಾರೆ. ವಿಜಯದ ಕ್ಷಣ ಬಹಳ ಸಂಭ್ರಮದಿಂದ ಕೂಡಿತ್ತು.
ಗೆಲುವಿನ ನಂತರ ಸಂದರ್ಶನವೊಂದರಲ್ಲಿ ರಿಯಾ ಸಿಂಘಾ ಸರ್ವರಿಗೂ ತಮ್ಮ ಕೃತಜ್ಞತೆ ಅರ್ಪಿಸಿದ್ದಾರೆ. "ಇಂದು ನಾನು ಮಿಸ್ ಯೂನಿವರ್ಸ್ ಇಂಡಿಯಾ 2024 ಪ್ರಶಸ್ತಿಯನ್ನು ಗೆದ್ದಿದ್ದೇನೆ. ನಾನು ಬಹಳ ಕೃತಜ್ಞಳಾಗಿದ್ದೇನೆ. ಈ ಮಟ್ಟಕ್ಕೆ ಬರಲು ಸಾಕಷ್ಟು ಶ್ರಮ ವಹಿಸಿದ್ದೇನೆ. ಈ ಕಿರೀಟಕ್ಕೆ ಅರ್ಹಳಾಗಿದ್ದೇನೆ ಎಂದು ಭಾವಿಸಿದ್ದೇನೆ. ಜೊತೆಗೆ ಹಿಂದಿನ ವಿಜೇತರಿಂದ ನಾನು ಸ್ಫೂರ್ತಿ ಪಡೆದಿದ್ದೇನೆ'' ಎಂದು ಅವರು ಇದೇ ವೇಳೆ ಸಂತಸ ವ್ಯಕ್ತಪಡಿಸಿದ್ದಾರೆ.
ಮಿಸ್ ಯೂನಿವರ್ಸ್ ಇಂಡಿಯಾ 2024 ಸ್ಪರ್ಧೆಯಲ್ಲಿ ತೀರ್ಪುಗಾರರಾಗಿದ್ದ 'ಮಿಸ್ ಯೂನಿವರ್ಸ್ ಇಂಡಿಯಾ 2015' ವಿಜೇತೆ ಊರ್ವಶಿ ರೌಟೇಲಾ ಕೂಡಾ ತಮ್ಮ ಅಭಿಪ್ರಾಯ ಹಂಚಿಕೊಂಡರು. "ಭಾರತ ಈ ವರ್ಷ ಮತ್ತೆ ವಿಶ್ವ ಸುಂದರಿ ಕಿರೀಟವನ್ನು ಗೆಲ್ಲಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು. "ಎಲ್ಲಾ ಹುಡುಗಿಯರು ಏನು ಭಾವಿಸುತ್ತಿದ್ದಾರೆ ಎಂಬುದನ್ನು ನಾನು ಭಾವಿಸಬಲ್ಲೆ. ವಿಜೇತರು ಮೈಂಡ್ ಬ್ಲೋಯಿಂಗ್. ವಿಶ್ವ ಸುಂದರಿ ಸ್ಪರ್ಧೆಯಲ್ಲಿ ನಮ್ಮ ದೇಶವನ್ನು ಅತ್ಯುತ್ತಮವಾಗಿ ಪ್ರತಿನಿಧಿಸಲಿದ್ದಾರೆ. ಭಾರತವು ಈ ವರ್ಷ ಮತ್ತೆ ವಿಶ್ವ ಸುಂದರಿ ಕಿರೀಟವನ್ನು ಗೆಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ. ಎಲ್ಲಾ ಹುಡುಗಿಯರು ಕಠಿಣ ಪರಿಶ್ರಮ ಹಾಕುತ್ತಿದ್ದಾರೆ, ಸಮರ್ಪಿತರಾಗಿದ್ದಾರೆ ಮತ್ತು ಅತ್ಯಂತ ಸುಂದರವಾಗಿದ್ದಾರೆ" ಎಂದು ತಿಳಿಸಿದರು.
ಇದನ್ನೂ ಓದಿ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ರೇಸ್; ಭಾರತವನ್ನು ಪ್ರತಿನಿಧಿಸಲಿದೆ ''ಲಾಪತಾ ಲೇಡೀಸ್'' - Laapataa Ladies to Oscars 2025
ಮಿಸ್ ಯೂನಿವರ್ಸ್ ಇಂಡಿಯಾ 2024 ವಿಜೇತೆ ರಿಯಾ ಸಿಂಘಾ ಅವರೀಗ ಮಿಸ್ ಯೂನಿವರ್ಸ್ 2024 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಸಜ್ಜಾಗುತ್ತಿದ್ದಾರೆ. ಸ್ಪರ್ಧೆ ಈ ವರ್ಷದ ಕೊನೆಯಲ್ಲಿ ಮೆಕ್ಸಿಕೋದಲ್ಲಿ ನಡೆಯಲಿದೆ. ರಿಯಾ ಸಿಂಘಾ 18 ವರ್ಷದವರಾಗಿದ್ದು, ಮೂಲತಃ ಗುಜರಾತಿ. ಅವರ ಸಮರ್ಪಣೆ ಮತ್ತು ಬದ್ಧತೆಯು ಮುಂದಿನ ಜಾಗತಿಕ ಈವೆಂಟ್‌ನಲ್ಲಿ ಭರವಸೆಯ ಸ್ಪರ್ಧಿಯನ್ನಾಗಿ ಮಾಡುತ್ತದೆ.
'ಮಿಸ್ ಯೂನಿವರ್ಸ್ ಇಂಡಿಯಾ' ಸ್ಪರ್ಧೆಯ ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಖತ್ ಸದ್ದು ಮಾಡುತ್ತಿದೆ. ವಿಜೇತೆ ರಿಯಾ ಸಿಂಘಾ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಮುಂದಿನ ಹಂತಕ್ಕೆ ಶುಭ ಹಾರೈಕೆಗಳೂ ಬರುತ್ತಿವೆ.