ಹೈದರಾಬಾದ್: ಸಚಿನ್ ತೆಂಡೂಲ್ಕರ್ ಈ ಹೆಸರು ಕೇಳದ ಕ್ರಿಕೆಟ್ ಅಭಿಮಾನಿಗಳು ಪ್ರಪಂಚದಲ್ಲಿ ಯಾರೂ ಇಲ್ಲ. 16ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಇವರು ಕ್ರಿಕೆಟ್ ದೇವರು ಎಂದೇ ಖ್ಯಾತಿ ಗಳಿಸಿದ್ದಾರೆ. ತಮ್ಮ ಅತ್ಯುತ್ತಮ ಬ್ಯಾಟಿಂಗ್ನಿಂದಲೇ ಕ್ರಿಕೆಟ್ ಲೋಕದಲ್ಲಿ ಯಾರೂ ಅಳಿಸಲಾಗದ ದಾಖಲೆಗಳನ್ನು ಬರೆದಿರುವ ಸಚಿನ್ ಆರ್ಥಿಕವಾಗಿಯೂ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟರ್ ಆಗಿದ್ದಾರೆ. ಸಚಿನ್ ಪ್ರೈವೇಟ್ ಜೆಟ್, ಬೆಲೆಬಾಳುವ ಕಾರುಗಳ ಜೊತೆಗೆ ಅತ್ಯಂತ ಐಷಾರಾಮಿ ಬಂಗ್ಲೆಗಳನ್ನು ಸಹ ಹೊಂದಿದ್ದಾರೆ. ಹಾಗಾದ್ರೆ ಸಚಿನ್ ಬಳಿ ಇರುವ ದುಬಾರಿ ಬೆಲೆಯ ಮನೆಗಳ ಬಗ್ಗೆ ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.
ಬಾಂದ್ರಾ ವೆಸ್ಟ್ ಹೌಸ್: ಸಚಿನ್ ತೆಂಡೂಲ್ಕರ್ ಹೊಂದಿರುವ ಐಷಾರಾಮಿ ಬಂಗ್ಲೆಗಳಲ್ಲಿ ಮುಂಬೈನ ಬಾಂದ್ರಾದ ಪೆರ್ರಿ ಕ್ರಾಸ್ ಬಳಿಯಿರುವ ಮನೆ ಕೂಡ ಒಂದಾಗಿದೆ. ಇದು 6000 ಚದರ್ ಅಡಿಗಳಷ್ಟು ವಿಸ್ತಾರವಾಗಿದ್ದು, ಈಜು ಕೊಳ, ಉದ್ಯಾನವನ ಜತೆಗೆ ಕಾರುಗಳ ಪಾರ್ಕಿಂಗ್ಗೆ ಬೇಕಾದ ಸ್ಥಳವನ್ನು ಇದು ಹೊಂದಿದೆ. ಡೋರಾಬ್ ಹೆಸರಿನ ವಿಲ್ಲಾ ಇದಾಗಿದ್ದು, ಆರಂಭದಲ್ಲಿ ಪಾರ್ಸಿ ಕುಟುಂಬಕ್ಕೆ ಸೇರಿತ್ತು. ಬಳಿಕ 2007ರಲ್ಲಿ ಇದನ್ನು ಸಚಿನ್ ತೆಂಡೂಲ್ಕರ್ ಅವರು ಖರೀದಿಸಿ ನವೀಕರಣಗೊಳಿಸಿದರು. ಅಂದು ಸಚಿನ್ ಅವರು ಇದನ್ನು 39 ಕೋಟಿ ರೂಪಾಯಿಗೆ ಖರೀದಿಸಿದ್ದರು. ಇಂದು ಇದರ ಬೆಲೆ 100 ಕೋಟಿಯದ್ದಾಗಿದೆ ಎಂದು ವರದಿಯಾಗಿದೆ.
ಲಂಡನ್ ಬಂಗ್ಲೆ: ಸಚಿನ್ ಅವರು ಭಾರತದಲ್ಲಿ ಮಾತ್ರವಲ್ಲದೇ ಲಂಡನ್ನಲ್ಲೂ ಐಷಾರಾಮಿ ಬಂಗ್ಲೆಯೊಂದನ್ನು ಹೊಂದಿದ್ದಾರೆ. ಕ್ರಿಕೆಟ್ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಲಾರ್ಡ್ಸ್ ಕ್ರಿಕೆಟ್ ಮೈದಾನದ ಸಮೀಪವೇ ಸಚಿನ್ ಮನೆಯನ್ನು ಹೊಂದಿದ್ದಾರೆ. ಸಚಿನ್ ಮೊದಲ ಬಾರಿಗೆ ಲಾರ್ಡ್ಸ್ ಮೈದಾನಕ್ಕೆ ಭೇಟಿ ನೀಡಿದಾಗ ಅವರಿಗೆ ತುಂಬಾ ಇಷ್ಟವಾಗಿತ್ತಂತೆ. ಹಾಗಾಗಿ ಮೈದಾನದ ಹತ್ತಿರದಲ್ಲೇ ಮನೆಯನ್ನು ಖರೀದಿಸಲು ನಿರ್ಧರಿಸಿದರು ಎಂದು ಹೇಳಲಾಗುತ್ತದೆ. ಇದರ ಬೆಲೆ ಎಷ್ಟೆಂದು ಎಲ್ಲೂ ಬಹಿರಂಗಗೊಂಡಿಲ್ಲ. ಈ ಮನೆ ಬಾಂದ್ರಾದಲ್ಲಿರುವ ಐಷಾರಾಮಿ ಬಂಗ್ಲೆಗಿಂತಲೂ ಹೆಚ್ಚಿನ ಬೆಲೆಯದಾಗಿದೆ ಎಂದು ಹೇಳಲಾಗುತ್ತಿದೆ.
ರುಸ್ತೂಂಜಿ ಅಪಾರ್ಟ್ಮೆಂಟ್: ಬಾಂದ್ರಾದಲ್ಲೇ ಸಚಿನ್ ಅವರು ಅಪಾರ್ಟ್ಮೆಂಟ್ ಅನ್ನು ಹೊಂದಿದ್ದಾರೆ. ರುಸ್ತೂಂಜಿ ಸೀಸನ್ ಹೆಸರಿನ ಈ ಅಪಾರ್ಟ್ಮೆಂಟ್ನಲ್ಲಿ ಸಚಿನ್ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಇದು 3 ಬೆಡ್ ರೂಂಗಳನ್ನು ಹೊಂದಿರುವ ಮನೆಯಾಗಿದೆ. ಇದರ ಬೆಲೆ 7.5 ಕೋಟಿ ಬೆಲೆಯದಾಗಿದೆ.
ಸಚಿನ್ ತೆಂಡೂಲ್ಕರ್ ಒಟ್ಟು ಮೌಲ್ಯ: ವಿಶ್ವದ ಶ್ರೀಮಂತ ಕ್ರಿಕೆಟರ್ ಎನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಅವರು ಸಂಪತ್ತಿನ ಮೌಲ್ಯ 2024ರ ವೇಳೆಗೆ 1400 ಕೋಟಿ ರೂಪಾಯಿಯದ್ದಾಗಿದೆ ಎಂದು ವರದಿಯಾಗಿದೆ.