ಬೆಳಗಾವಿ: ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರಖುರ್ದದಲ್ಲಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಬಿಡುಗಡೆಯಲ್ಲಿ ತಾಂತ್ರಿಕ ಕಾರಣ ನೀಡುವ ಮೂಲಕ ಸರ್ಕಾರ ಸಂತ್ರಸ್ತರ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರವಾಹ ಸಂತ್ರಸ್ತರು, ಸರ್ಕಾರದ ಧೋರಣೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡ ನೆರೆ ಸಂತ್ರಸ್ತರು, ನೆರೆ ಪ್ರವಾಹಕ್ಕೆ ತುತ್ತಾದ ಜನರಿಗೆ ರಾಜ್ಯ ಸರ್ಕಾರ ಈ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು. ಜಿಲ್ಲೆಯ ಕಾಗವಾಡ ತಾಲೂಕಿನಲ್ಲಿ ಕಳೆದ ವರ್ಷ ಪ್ರವಾಹದಿಂದ ಉಗಾರಖುರ್ದ ಸೇರಿದಂತೆ ಇತರ ಗ್ರಾಮದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜನರ ಆಸ್ತಿ-ಪಾಸ್ತಿ ಹಾನಿಯಾಗಿದೆ.
ಆದ್ರೆ, ಸಂತ್ರಸ್ತರಿಗೆ ಈವರೆಗೂ ಪರಿಹಾರ ಸಂದಾಯ ಆಗಿಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೆ ಅವರು ಪದೇ ಪದೇ ತಾಂತ್ರಿಕ ನೆಪಗಳನ್ನು ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ಇನ್ನು ಕಳೆದ ವರ್ಷದ ಪ್ರವಾಹದಲ್ಲಿ ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡಿರುವ ಸಂತ್ರಸ್ತರು ಸಂಕಷ್ಟದಲ್ಲಿದ್ದು, ಸರ್ಕಾರ ಈ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.