ಬೆಳಗಾವಿ: ಸರ್ಕಾರ, ಪೊಲೀಸರು, ಸೈನಿಕರಿಂದ ಮಾತ್ರ ಹಿಂದೂ ಧರ್ಮದ ರಕ್ಷಣೆ ಸಾಧ್ಯವಿಲ್ಲ. ಹಿಂದೂ ಸಮಾಜದಲ್ಲಿ ಪರಾಕ್ರಮ ಜಾಗೃತಗೊಳಿಸಬೇಕಿದೆ ಎಂದು ವಿಹೆಚ್‌ಪಿ ಮುಖಂಡ, ಅಯೋಧ್ಯೆ ರಾಮಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲ್ ನಾಗರಕಟ್ಟೆ ಹೇಳಿದರು.
ನಗರದಲ್ಲಿ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಪರಾಕ್ರಮ ಮುಖ್ಯವಾಗಿದೆ. ನಾವು ಪರಾಕ್ರಮ ಆರಾಧನೆ ಮಾಡಿದ್ದೇವೆ. ಕೆಲವು ವರ್ಷಗಳ ಕಾಲ ಕೆಲವರು ಶಾಂತಿ - ಶಾಂತಿ ಎಂದು ಹೇಳಿದರು. ಸದ್ಯ ದೇಶದಲ್ಲಿ ಪರಾಕ್ರಮ ಜಾಗೃತ ಆಗಬೇಕಿದೆ. ಪರಾಕ್ರಮ ಮಾಡದೇ ಇದ್ದರೇ ಶಿವಾಜಿ ಫೋಟೋ ಹಾಕಲು ಅನರ್ಹರು ಎಂದು ಅವರು ಹೇಳಿದರು.
ಪೊಲೀಸ್ ಕೇಸ್ಗೆ ನಾವು ಹೆದರಬಾರದು. ಕನ್ಹಯ್ಯ ಹತ್ಯೆ, ನೂಪುರ್ ಶರ್ಮಾ ವಿರುದ್ಧ ಧ್ವನಿ ಎತ್ತಿದಾಗ ಬಜರಂಗದಳ ಯುವಕರು ಸಮ್ಮನಾದದ್ದು ದುರ್ದೈವ. ಬಜರಂಗ ದಳದ ಯುವಕರ ರಕ್ತ ಬಿಸಿ ಇಲ್ಲವೇ?. ಬಜರಂಗದಳ ಕಾರ್ಯಕರ್ತರು ಬೀದಿಗೆ ಇಳಿದಿದ್ದರೆ ಮುಂದಿನ 50ವರ್ಷಗಳ ಕಾಲ ನೂಪುರ್ ಶರ್ಮಾ ವಿರುದ್ಧ ವಿರೋಧ ವ್ಯಕ್ತವಾಗುತ್ತಿರಲಿಲ್ಲ.
ಸರಿಯಾದ ಉತ್ತರ ಹಿಂದೂಗಳು ಕೊಡದಿದ್ದರೆ ಜಗತ್ತು ನಮ್ಮ ಮುಂದೆ ಭಾಗುವುದಿಲ್ಲ. ಹಿಂದೂಗಳು ನಾವು ಯಾರ ಮೇಲೆ ಪ್ರರಾಕ್ರಮ ತೋರಿಸುವುದಿಲ್ಲ. ಹಿಂದೂಗಳ ವಿಚಾರಕ್ಕೆ ಬಂದಾಗ ಉತ್ತರ ಕೊಡಬೇಕು. ಶಸ್ತ್ರ ಪೂಜೆ ಅಂದ್ರೆ ಚಿಕ್ಕಚಿಕ್ಕ ಚಾಕು, ಚಿಕ್ಕ ಚಿಕ್ಕ ಕತ್ತರಿಯ ಪೂಜೆಯಲ್ಲ. ಶಸ್ತ್ರ ಪೂಜೆ ಅಂದ್ರೆ ಹೊಡೆದಾಟ ಮಾಡಲು ಬಳಸುವ ಶಸ್ತ್ರಗಳು. ಅಂತಹ ಶಸ್ತ್ರಗಳ ಶಸ್ತ್ರ ಅಭ್ಯಾಸ ಮಾಡಿ ಹಿಂದೂಗಳು ಪರಾಕ್ರಮ ಪ್ರದರ್ಶನ ಮಾಡಬೇಕಿದೆ. ಅಷ್ಟೇ ಅಲ್ಲ ಬಳಸಲು ಸಹ ಕಲಿಯಬೇಕು ಎಂದು ಹೇಳಿದರು.
ಹಿಂದೂ ಸಮಾಜದ ಉನ್ನತಿಗೆ ಶ್ರಮಿಸಬೇಕು : ರಾವಣ, ಸದ್ದಾಂ ಹುಸೇನ್ ಆಗಬೇಕಿಲ್ಲ.ರಾಮ, ಶಿವಾಜಿ ಹಾಗೇ ಸದ್ಗುಣ ಸಂಪನ್ನಾಗಬೇಕಿದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಹಿಂದೂ ಸಮಾಜದ ಉನ್ನತಿಗೆ ನಾವೆಲ್ಲರೂ ಪ್ರಯತ್ನ ಮಾಡಬೇಕು. ಕೆಲವು ಉದ್ಯೋಗ ಹಿಂದೂಗಳ ಕೈಯಿಂದ ತಪ್ಪುತ್ತಿವೆ. ಯಾವುದೇ ಉದ್ಯೋಗ ಅಪವಿತ್ರವಲ್ಲ. ಎಲ್ಲ ಕೆಲಸ ಮಾಡಲು ನಾವು ಸಿದ್ದವಾಗಬೇಕು ಭಾಷಣದಲ್ಲಿ ಹೇಳಿದರು.
ಪ್ರತೀ ಮನೆಯಲ್ಲೂ ಪರಾಕ್ರಮದ ಆರಾಧನೆ ನಡೆಯಬೇಕು : ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಜರಂಗದಳದ ಕಾರ್ಯಕರ್ತರಿಂದ ಬೆಳಗಾವಿಯಲ್ಲಿ ಶಸ್ತ್ರಗಳ ಪೂಜೆ ಆಗಿದೆ. ಸಮಾಜದಲ್ಲಿ ಪರಾಕ್ರಮ ಜಾಗೃತಿ ಆಗಬೇಕು. ಪರಾಕ್ರಮದಿಂದಲೇ ಹಿಂದೂ ಸಂಸ್ಕೃತಿ ಉಳಿಸಬೇಕು. ಭಾರತದ ಸಂಸ್ಕೃತಿ, ಧರ್ಮ ಉಳಿಸಲು ಪರಾಕ್ರಮ ಜಾಗೃತ ಆಗಬೇಕು. ಸ್ವ - ಸಾಮರ್ಥ್ಯದ ಮೂಲಕ ಹಿಂದೂ ಧರ್ಮದ ರಕ್ಷಣೆ, ಭಾರತದ ಸಂಸ್ಕೃತಿ ಉಳಿಸಬೇಕಿದೆ. ಈ ಕಾರಣಕ್ಕೆ ಪ್ರತಿ ಮನೆ ಮನೆಗಳಲ್ಲಿ ಪರಾಕ್ರಮದ ಆರಾಧನೆ ನಡೆಯಬೇಕು.ಪರಾಕ್ರಮದ ಜೊತೆಗೆ ಹಿಂದೂಗಳ ಸ್ವಾಭಿಮಾನವೂ ಹೆಚ್ಚಾಗಬೇಕು ಎಂದರು.
ಯುದ್ಧದ ಸಂದರ್ಭದಲ್ಲಿ ಅನೇಕರ ಬಲಿದಾನ ಆಗುತ್ತದೆ : ದೇಶ, ರಾಜ್ಯದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆ ವಿಚಾರಕ್ಕೆ, ದೊಡ್ಡ ಕಾರ್ಯಗಳು ಕೈಗೊಂಡಾಗ ಕೆಲವೊಮ್ಮೆ ವಿಘ್ನಗಳು ಬರುತ್ತವೆ. ಯುದ್ಧದ ಸಂದರ್ಭದಲ್ಲಿ ಅನೇಕರ ಬಲಿದಾನ ಆಗುತ್ತವೆ. ಅದು ಸಾಮಾನ್ಯ. ಹಿಂದೂ ಸಮಾಜ ಸಂಘಟನೆ ನಡೆಯುತ್ತಿದೆ. ಈ ವೇಳೆ, ಆಗಾಗ ವಿಘ್ನಗಳು ನಡೆಯುತ್ತವೆ. ಅದನ್ನು ಎದುರಿಸಲು ಈಗ ಹಿಂದೂ ಸಂಘಟನೆಗಳು ಸಜ್ಜುಗೊಳ್ಳುತ್ತಿವೆ. ಭಾರತ ದೇಶದಲ್ಲಿ ಈ ಮೊದಲು ಕೇವಲ ಹಿಂದೂಗಳ ಹತ್ಯೆ ಅಷ್ಟೇ ಆಗ್ತಿತ್ತು. ಈಗ ಉತ್ತರ ಕೊಡುವ ಪ್ರಯತ್ನಗಳು ನಡೆಯುತ್ತಿವೆ. ಇದು ಇನ್ನಷ್ಟು ಗಟ್ಟಿಯಾಗಬೇಕು ಎಂದರು.
ಆರ್‌ಎಸ್‌ಎಸ್ ಬ್ಯಾನ್ ಮಾಡುವುದು ಕೇವಲ ಕನಸು ಅಷ್ಟೇ : ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್ ಪಡೆಯುವ ವಿಚಾರಕ್ಕೆ,ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್ ಪಡೆಯಲು ಸರ್ಕಾರಕ್ಕೆ ನಾನು ಆಗ್ರಹಿಸುತ್ತೇನೆ. ಪಿಎಫ್ಐ ಬಳಿಕ ಆರ್‌ಎಸ್‌ಎಸ್ ಬ್ಯಾನ್ ಆಗಬೇಕು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ,ಆರ್‌ಎಸ್‌ಎಸ್ ಬ್ಯಾನ್ ಮಾಡುವುದು ಕೇವಲ ಅವರ ಕನಸು ಅಷ್ಟೇ.
ಇಂಥ ಪ್ರಯತ್ನಗಳು ಈ ಹಿಂದೆ ಬಹಳ ಸಲ ನಡೆದಿವೆ. ಅವು ತಾತ್ಕಾಲಿಕವಾಗಿದೆಯಷ್ಟೇ. ಸೂರ್ಯನ ಕಿರಣ ತಡೆಯಲು ಆಗಾಗ ಗ್ರಹಣ ಬರುತ್ತದೆ. ಅದು ಕ್ಷಣಿಕ ಮಾತ್ರ. ಗೃಹಣದಿಂದ ಸೂರ್ಯನ ಕಿರಣ ತಡೆಯಲು ಸಾಧ್ಯವಿಲ್ಲ. ಅದೇ ರೀತಿ ಆರ್‌ಎಸ್‌ಎಸ್ ಶ್ರೇಷ್ಠ ಕಾರ್ಯ ತಡೆಯಲು ಸಾಧ್ಯವಿಲ್ಲ ಎಂದರು.
ಇದೇ ವೇಳೆ, ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿವೆ ಎಂಬ ಆರ್‌ಎಸ್‌ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಹೇಳಿಕೆ ವಿಚಾರ ಹಾಗೂ ಪರೇಶ್ ಮೇಸ್ತಾ ಪ್ರಕರಣದ ಕುರಿತು ಪ್ರತಿಕ್ರಿಯಿಸಲು ಗೋಪಾಲ ನಾಗರಕಟ್ಟೆ ನಿರಾಕರಿಸಿದರು.
ಇದನ್ನೂ ಓದಿ : ವಿಜಯದಶಮಿಯ ಸಂಭ್ರಮದಲ್ಲಿ ಶಾರದೆಯ ಆರಾಧನೆ: ವಿದ್ಯಾರಂಭದ ಮೂಲಕ ಜ್ಞಾನರ್ಜನೆಗೆ ಮುನ್ನುಡಿ