ಬೆಳಗಾವಿ : ಸಂಸತ್ನಲ್ಲಿ ನಡೆದ ಭದ್ರತಾ ಲೋಪ ಘಟನೆ ವಿಧಾನಸಭೆಯಲ್ಲೂ ಪ್ರತಿಧ್ವನಿಸಿತು. ಸಂಸತ್ ಘಟನೆ ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ವಾಕ್ಸಮರಕ್ಕೆ ಕಾರಣವಾಯಿತು. ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಂಸತ್ ದಾಳಿ ಘಟನೆಯನ್ನು ಎಲ್ಲರೂ ಖಂಡಿಸಬೇಕಾಗುತ್ತದೆ. ಸಂಸತ್ಗೆ ಹೋಗಿ ಯಾರಿಂದಲೋ ಪಾಸ್ ಪಡೆದು ಹೋಗಿದ್ದಾರೆ. ಸಂಸತ್ ಸದಸ್ಯರೊಬ್ಬರಿಂದ ಪಾಸ್ ಪಡೆದಿದ್ದಾರೆ ಎನ್ನಲಾಗಿದೆ. ಪಾಸ್ಗಳನ್ನು ಕೊಡುವಾಗ ಗೊತ್ತಿರುವವರಿಗೆ ಮಾತ್ರ ಕೊಡಬೇಕು. ಗೊತ್ತಿಲ್ಲದವರಿಗೆ ಪಾಸ್ ಕೊಡಬಾರದು. ಈ ಘಟನೆ ಮೇಲ್ನೋಟಕ್ಕೆ ಭದ್ರತಾ ಲೋಪವಾಗಿದೆ ಎಂದರು.
ಭದ್ರತಾ ಸಿಬ್ಬಂದಿ ಅವರನ್ನು ಸರಿಯಾಗಿ ತಪಾಸಣೆ ಮಾಡಿಲ್ಲ ಅನ್ಸುತ್ತೆ. ಸಚಿವರಿಗೆ ಸೇರಿ ಎಲ್ಲರಿಗೂ ತಪಾಸಣೆ ಮಾಡ್ತಾರೆ. ತಪಾಸಣೆ ಮಾಡಿದರೂ ಹೇಗೆ ಸ್ಮೋಕ್ ಸ್ಪ್ರೇ ಮಾಡಿದ್ರು?. ನಾನು ಅನುಮಾನ ವ್ಯಕ್ತಪಡಿಸ್ತಿಲ್ಲ. ಇಲ್ಲೂ ಕೂಡಾ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು. ಪಾಸ್ ಪಡೆದು ಒಳ್ಳೆಯವ್ರೂ ಬರಬಹುದು, ಕೆಟ್ಟವರೂ ಬರಬಹುದು, ಉಗ್ರರೂ ಬರಬಹುದು. ಹಿಂದೆ ಸಂಸತ್ಗೆ ಉಗ್ರರು ನುಗ್ಗಿದ್ರು. ಗೃಹ ಸಚಿವರ ಬಳಿ ಅಧಿವೇಶನಕ್ಕೆ ಭಾರೀ ಪೊಲೀಸ್ ಬಂದೋಬಸ್ತ್ ಕೊಡಲು ಹೇಳ್ತೀನಿ. ಸ್ಪೀಕರ್ ಅವರು ಕೂಡಾ ನಿಮ್ಮ ಸಿಬ್ಬಂದಿಗೆ ಹೇಳಿ ಭದ್ರತಾ ಲೋಪ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಪಾಸ್ ಕೊಡುವಾಗಲೂ ಎಚ್ಚರಿಕೆ ವಹಿಸಬೇಕು. ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸ್ತೇನೆ. ಅದೃಷ್ಟವಶಾತ್ ಸಂಸತ್ನಲ್ಲಿ ಏನೂ ಆಗಿಲ್ಲ. ತಕ್ಷಣ ಸ್ಪೀಕರ್ ಕಲಾಪ ಮುಂದೂಡಿ ಎಲ್ಲರೂ ಹೊರಗೆ ಹೋಗಲು ಅವಕಾಶ ಮಾಡಿದ್ರು. ಈ ಕುರಿತು ಬಹಳ ಎಚ್ಚರಿಕೆ ವಹಿಸೋದು ಒಳ್ಳೆಯದು. ಇಂತಹ ಘಟನೆ ಮರುಕಳಿಸಬಾರದು ಎಂದರು.
ಪ್ರತಾಪ್ ಸಿಂಹ ಇಂಥವರಿಗೆ ಏಕೆ ಪಾಸ್ ಕೊಟ್ರು?: ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಸಂಸದ ಪ್ರತಾಪ್ ಸಿಂಹ ಬಹಳ ಬುದ್ಧಿವಂತ. ಅವರ್ಯಾಕೆ ಇಂಥವರಿಗೆ ಪಾಸ್ ಕೊಟ್ರೋ. ಅವರ ಹೆಸರು ಹೇಳಲು ಇಲ್ಲಿ ನನಗೆ ಇಷ್ಟ ಇಲ್ಲ. ಎಲ್ರೂ ಫೋನ್ ಮಾಡ್ತಿದ್ದಾರೆ, ಏನು, ಯಾಕೆ ಅಂತ. ನಾನು ಟಿವಿಯಲ್ಲಿ ನೋಡಿದೆ. ಮೇಲಿಂದಲೇ ಅವರು ಜಂಪ್ ಮಾಡಿದಾರೆ. ಸಂಸದರೆಲ್ಲ ಇಲಿಗಳಂತೆ ಬಚ್ಚಿಕೊಳ್ತಿದ್ದಾರೆ. ಈ ಬಗ್ಗೆ ನಮ್ಮ ಪ್ರತಿಪಕ್ಷದಲ್ಲಿರುವವರೇ ಹೊಣೆ ಹೊರಬೇಕು. ಅವರು ಏನು ಬುದ್ಧಿವಾದ ಹೇಳ್ತಾರೋ ಹೇಳಲಿ ಎಂದರು.
ಡಿಕೆಶಿ ರಾಜಕೀಯ ಬೆರೆಸುತ್ತಿದ್ದಾರೆ : ಈ ಬಗ್ಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಇದು ಖಂಡನೆ ಮಾಡುವ ವಿಚಾರ. ಸಿಎಂ, ಗೃಹ ಸಚಿವರು ಚೆನ್ನಾಗಿಯೇ ಮಾತಾಡಿದ್ರು. ಆದರೆ ಡಿಕೆಶಿ ಅವರು ಈ ವಿಚಾರ ರಾಜಕೀಯಕ್ಕೆ ಬಳಸಿಕೊಂಡ್ರು. ಅವರ ತಮ್ಮನೂ ಸಂಸದ, ಅವರೇ ಪಾಸ್ ಕೊಟ್ಟಿದ್ದಿದ್ರೆ ಏನ್ ಮಾಡ್ತಿದ್ರಿ. ಡಿಕೆಶಿಗೆ ಅಶೋಕ್ ಟಾಂಗ್ ನೀಡಿದರು. ಈ ವೇಳೆ ಗದ್ದಲ ಏರ್ಪಟ್ಟಿತು.
ಮಧ್ಯ ಪ್ರವೇಶಿಸಿದ ಸ್ಪೀಕರ್, ಪ್ರಬುದ್ಧತೆ ಮೆರೆಯಿರಿ ಅಂತ ಪದೇ ಪದೆ ಮನವಿ ಮಾಡಿದರು. ಇದನ್ನು ರಾಜಕೀಯಕರಣಗೊಳಿಸೋದು ಸರಿಯಲ್ಲ ಅಂತ ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಡಿಕೆಶಿಗೂ ಅಶೋಕ್ ಅವರಿಗೂ ವಾಕ್ಸಮರ ಉಂಟಾಯಿತು. ಈ ವೇಳೆ ಮಾತನಾಡಿದ ಕೈ ಶಾಸಕಿ, ನಯನಾ ಮೋಟಮ್ಮ ಮಾತಾಡಿ ಬಿಜೆಪಿ ಸಂಸದ ಅಲ್ಲದೇ ಬೇರೆ ಸಂಸದರು ಪಾಸ್ ಕೊಟ್ಟಿದ್ರೆ. ಇನ್ನೇನು ಆಗ್ತಿತ್ತೋ ಅಂತ ಅನುಮಾನ ವ್ಯಕ್ತಪಡಿಸಿದರು. ನಯನಾ ಮಾತಿಗೆ ಬಿಜೆಪಿ ಸದಸ್ಯರಿಂದ ತೀವ್ರ ವಿರೋಧ, ಆಕ್ಷೇಪ ವ್ಯಕ್ತವಾಯಿತು.
ಕಾಂಗ್ರೆಸ್ ಸಂಸದರು ಪಾಸ್ ಕೊಟ್ಟಿದ್ರೆ ಏನಾಗುತ್ತಿತ್ತು?: ಈ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಇದೇ ಪಾಸ್ ಕಾಂಗ್ರೆಸ್ ಸಂಸದರು ಕೊಟ್ಟಿದ್ದಿದ್ರೆ ಏನಾಗ್ತಿತ್ತು?. ಆಗ ಅಶೋಕ್, ಬಿಜೆಪಿಯವರು ಸುಮ್ನಿರ್ತಿದ್ರಾ?. ಆಗ ನಮಗೆಲ್ಲ ದೇಶದ್ರೋಹದ ಪಟ್ಟ ಕಟ್ಟುತ್ತಿದ್ದರು. ಈಗ ಪ್ರತಾಪ್ ಸಿಂಹ ಬಗ್ಗೆ ಇವರ ನಿಲುವೇನು? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸಂಸದರು ಪಾಸ್ ಕೊಟ್ಟಿದ್ರೆ ಏನಾಗ್ತಿತ್ತು?. ಇಂತಹ ಘಟನೆಯನ್ನು ನಾವು ಖಂಡಿಸುತ್ತೇವೆ. ಕಾಂಗ್ರೆಸ್ ಸಂಸದರು ಕೊಟ್ಟಿದ್ದರೆ ಭಯೋತ್ಪಾದಕರ ಹಣೆ ಪಟ್ಟಿ ಕಟ್ತಿದ್ರು. ಇವರದು ಮಾತ್ರ ದೇಶಪ್ರೇಮ. ನಮ್ಮದು ಮಾತ್ರ ದೇಶ ದ್ರೋಹನಾ?.ಕಾಂಗ್ರೆಸ್ ಸಂಸದರಾಗಿದ್ದರೆ ಸುಮ್ಮನಿರ್ತಿದ್ರಾ? ಎಂದು ಆರ್.ಅಶೋಕ್ಗೆ ನೇರ ಪ್ರಶ್ನೆ ಹಾಕಿದರು.
ಎಲ್ಲಿ ಲೋಪವಾಗುತ್ತೆ ಅಂತ ಗೊತ್ತಾಗಲ್ಲ: ಇದೇ ವೇಳೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ನಾನು ಈ ಘಟನೆಯನ್ನು ಖಂಡಿಸುತ್ತೇನೆ. ಈ ಸದನದ ವ್ಯಾಪ್ತಿ ನಿಮಗೆ ಸೇರುತ್ತದೆ. ಆದರೂ ನಾವು ಭದ್ರತೆಗೆ ಒತ್ತು ಕೊಡ್ತೇವೆ. ನಾವು ಪಾಸುಗಳನ್ನು ಕೊಟ್ಟು ಬಿಡ್ತೇವೆ. ಯಾರು ಏನು ಅಂತ ನಾವು ಯೋಚಿಸಲ್ಲ. ಇದು ಎಲ್ಲಿ ಲೋಪ ಆಗುತ್ತದೆ ನಮಗೆ ಗೊತ್ತಾಗಲ್ಲ. ಪಾಸ್ ಕೊಡುವ ವೇಳೆ ಎಲ್ಲ ಪರಿಶೀಲಿಸಬೇಕು. ಕಾರಿಡಾರ್ನಲ್ಲಿ ನಾನು ನೋಡಿದೆ. ಡಿಸಿಪಿಗಳಿಗೆ ನಾನು ಬೈಯ್ದೆ. ಚೀಫ್ ಮಿನಿಸ್ಟರ್ ಲಿಫ್ಟ್ಗೆ ಹೋಗೋಕೆ ಆಗ್ತಿಲ್ಲ. ನಾನೇ ಅಧಿಕಾರಿಗಳನ್ನು ಕರೆದು ಸೂಚಿಸಿದ್ದೇನೆ. ನಾವು ಬಹಳ ಎಚ್ಚರಿಕೆಯಿಂದ ಇರಬೇಕು. ಭದ್ರತೆಯ ಬಗ್ಗೆ ನಾವು ನೋಡಿಕೊಳ್ತೇವೆ ಎಂದರು.
ಕಾಂಗ್ರೆಸ್-ಬಿಜೆಪಿ ಮಧ್ಯೆ ವಾಕ್ಸಮರ : ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ಮಧ್ಯೆ ತೀವ್ರ ಗದ್ದಲ ಏರ್ಪಟ್ಟಿತು. ಈ ಗದ್ದಲಕ್ಕೆ ಡಿಸಿಎಂ ಕಾರಣ ಎಂದು ಸುರೇಶ್ ಕುಮಾರ್ ಆಕ್ಷೇಪಿಸಿದರು. ಈ ವೇಳೆ ಸುರೇಶ್ ಕುಮಾರ್ ವಿರುದ್ಧ ತಿರುಗಿಬಿದ್ದ ಡಿಕೆಶಿ, ಕಾಂಗ್ರೆಸ್ ನವರು ಮಾಡಿದ್ರೆ ಸುಮ್ಮನಿರ್ತಿದ್ರಾ?. ಇಷ್ಟೊತ್ತಿಗೆ ನೀವು ಅಲ್ಲೋಲಕಲ್ಲೋಲ ಮಾಡಿಬಿಡ್ತಿದ್ರಿ ಎಂದು ತಿರುಗೇಟು ನೀಡಿದರು.
ಇದೇ ವೇಳೆ ಮಧ್ಯಪ್ರವೇಶಿಸಿದ ಆರ್.ಅಶೋಕ್, ಲಿಫ್ಟ್ ಹತ್ರ ಹೋದ್ರೆ ಜನ ಸೇರ್ತಾರೆ, ಏನಾದ್ರೂ ಆದ್ರೆ ಸ್ಪೀಕರ್ ಜವಾಬ್ದಾರಿನಾ?. ನಮ್ಮ ಸದನದಲ್ಲೂ ಈ ಥರ ಆಗಬಾರದು. ಇದಕ್ಕೆ ಯಾರು ಅಧಿಕಾರದಲ್ಲಿರ್ತಾರೋ ಅವರೇ ಕಾರಣ ಅಂತ ಹೇಳಕ್ಕಾಗಲ್ಲ. ಎಲ್ಲಿವರೆಗೆ ಸಂಸತ್ ನಮ್ದು, ವಿಧಾನಸಭೆ ನಮ್ದು ಅನ್ನೋ ಭಾವನೆ ಬರಲ್ವೋ ಅಲ್ಲಿಯವರೆಗೆ ಸರಿಯಾಗಲ್ಲ. ಈ ಥರದ ವ್ಯಕ್ತಿಗಳಿಂದಲೇ ಎಲ್ಲ ಹಾಳಾಗೋದು ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು. ಗದ್ದಲ ಜೋರಾದ ಹಿನ್ನೆಲೆಯಲ್ಲಿ ಸ್ಪೀಕರ್ ಕಲಾಪವನ್ನು ಹತ್ತು ನಿಮಿಷ ಮುಂದೂಡಿದರು.
ಇದನ್ನೂ ಓದಿ : ಸಂಸತ್ನಲ್ಲಿ ಭದ್ರತಾ ಲೋಪ: ಸ್ಪೀಕರ್ ಸೂಚನೆ ಮೇರೆಗೆ ಸುವರ್ಣಸೌಧದಲ್ಲೂ ಪೊಲೀಸ್ ಬಿಗಿ ಭದ್ರತೆ