ಅಥಣಿ: ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ, ಈಗಾಗಲೇ ಬೊಮ್ಮಾಯಿ ಅವರಿಂದ ಭರ್ತಿಯಾಗಿದೆ ಎಂದು ಅರಣ್ಯ ಹಾಗೂ ಆಹಾರ ನಾಗರಿಕ ಸರಬರಾಜು ಇಲಾಖೆ ಸಚಿವರಾದ ಉಮೇಶ್ ಕತ್ತಿ ಹೇಳಿದ್ದಾರೆ.
ಅಥಣಿಯಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಲಕ್ಷ್ಮೀ ಸಸ್ಯೋಧ್ಯಾನದ ಉದ್ಘಾಟನೆ ನೆರವೇರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅಸ್ಥಿತ್ವದಲ್ಲಿದ್ದು, ಜನಪರ ಕಾರ್ಯಗಳನ್ನು ಮಾಡುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಾಡುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಪಡಿತರದಾರರಿಗೆ ಅಕ್ಕಿ ಬದಲಾಗಿ ಜೋಳ ಅಥವಾ ರಾಗಿಯನ್ನು ಬೇಡಿಕೆಗಳಿಗುಣವಾಗಿ ಶೀಘ್ರದಲ್ಲೇ ವಿತರಿಸುತ್ತೇವೆ ಎಂದ ಅವರು, ಅಥಣಿ ಜಿಲ್ಲೆಯಾಗುವ ಬಗ್ಗೆ ಆಶಯ ಇದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ ಎಂದರು.