ಚಿಕ್ಕೋಡಿ : ಬೆಳಗಾವಿ ಜೆಲ್ಲೆಯ ಹುಕ್ಕೇರಿ ತಾಲೂಕಿನ ಬಿರನೋಳಿ ಗ್ರಾಮದ ಕೆಂಪಗುದ್ದಿ ಗುಡ್ಡದ ಬದಿಯಲ್ಲಿ ಮಣ್ಣು ಶೇಖರಣೆ ಮಾಡುವ ಸಮಯದಲ್ಲಿ ಗುಡ್ಡದ ಮಣ್ಣು ಕುಸಿದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ಬಿರನೋಳಿ ಗ್ರಾಮದ ಯಲ್ಲಪ್ಪಾ ಹರಿಜನ (22) ಹಾಗೂ ಹಾಲಪ್ಪಾ ಗುರವ (24) ಎಂಬುವರು ಮೃತ ಯುವಕರು. ಈ ಮೊದಲು ಈ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿ - 4ರ ರಸ್ತೆಗೋಸ್ಕರ ಕೆಂಪು ಮಣ್ಣು ತೆಗೆಯಲಾಗಿದೆ. ಮಣ್ಣಿನ ದಿಣ್ಣೆಗಳು ಉಳಿದಕೊಂಡಿವೆ. ಇದನ್ನು ತಮ್ಮ ಸ್ವಂತ ಕೆಲಸಕ್ಕೆ ಮಣ್ಣು ತೆಗೆಯುವಾಗ ಗುಡ್ಡ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಯಮಕನಮರಡಿ ಪಿಎಸ್ಐ ರಮೇಶ ಪಾಟೀಲ ಸ್ಥಳಕ್ಕೆ ಧಾವಿಸಿದ್ದು, ಓರ್ವ ಯುವಕನ ಶವ ಹೊರ ತೆಗೆದು ಮತ್ತೋರ್ವನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.