ಬೆಳಗಾವಿ: ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಬೆಳಗಾವಿ ತಾಲೂಕಿನ ರಾಜಹಂಸಘಡ ಬಳಿಯ ಕ್ವಾರಿಯಲ್ಲಿ ನಡೆದಿದೆ.
ಬೆಳಗಾವಿಯ ಸರ್ವೋದಯ ಕಾಲೊನಿಯ ಗಣೇಶ ಕಾಂಬಳೆ (17), ಆನಂದವಾಡಿಯ ತೇಜಸ್ ಯಲಕಪಾಟಿ (19) ಮೃತರು. ಘಟನೆಯಲ್ಲಿ ಓರ್ವ ಬಚಾವ್ ಆಗಿದ್ದಾನೆ.
ಭಾನುವಾರ ಮಧ್ಯಾಹ್ನ ಫೋಟೋಶೂಟ್ಗೆಂದು ಯುವಕರು ಕ್ವಾರಿಗೆ ಇಳಿದಿದ್ದಾರೆ. ಮಳೆಯಿಂದ ಕಲ್ಲು ಕ್ವಾರಿ ಕೆರೆಯಂತಾಗಿತ್ತು. ಸೆಲ್ಫಿ ತೆಗೆದುಕೊಳ್ಳುವ ವೇಳೆ ಯುವಕರು ಜಾರಿ ಕ್ವಾರಿಯಲ್ಲಿ ಬಿದ್ದಿದ್ದಾರೆ. ನೀರಿಗೆ ಬಿದ್ದ ಇಬ್ಬರ ರಕ್ಷಣೆಗೆ ಮತ್ತೋರ್ವ ಸ್ನೇಹಿತ ಮುಂದಾದರೂ ಆತನ ಪ್ರಯತ್ನ ವಿಫಲವಾಗಿದೆ.
ತಕ್ಷಣ ಯುವಕ ಘಟನೆ ಕುರಿತು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ದೌಡಾಯಿಸಿದ್ದಾರೆ. ಜೊತೆಗೆ ಸ್ಥಳಕ್ಕೆ ಎನ್ಡಿಆರ್ಎಫ್ ತಂಡ ಆಗಮಿಸಿ ಕಾರ್ಯಾಚರಣೆ ನಡೆಸಿ ತಡರಾತ್ರಿ ಇಬ್ಬರ ಮೃತದೇಹ ಹೊರತೆಗೆದಿದ್ದಾರೆ.
ಘಟನೆ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೈಕ್ಗೆ ಲಾರಿ ಡಿಕ್ಕಿ : ತಂದೆ-ಮಗ ಸ್ಥಳದಲ್ಲೇ ಸಾವು