ಚಿಕ್ಕೋಡಿ : ಎರಡು ಮಕ್ಕಳ ತಾಯಿಯೊಬ್ಬಳು ಸ್ನಾತಕೋತ್ತರ ಪದವಿಯ ಇಂಗ್ಲಿಷ್ ಐಚ್ಛಿಕ ವಿಷಯದಲ್ಲಿ ಹಾಗೂ ಪದವಿಯಲ್ಲಿ ಇಂಗ್ಲಿಷ್ ಮತ್ತು ಇತಿಹಾಸ ವಿಷಯದಲ್ಲಿ ಬಂಗಾರದ ಪದಕ ಪಡೆಯುವುದರ ಮೂಲಕ ಇತರೆ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಪಾರ್ವತಿ ರಾಜಶೇಖರ ಶೇಗುಣಸಿ ಈ ಸಾಧನೆಗೆ ಪಾತ್ರರಾದ ಮಹಿಳೆ. ಡಾ.ಸಿಬಿ ಕುಲಿಗೋಡ ಪದವಿ ಕಾಲೇಜಿನಲ್ಲಿ ಇಂಗ್ಲಿಷ್, ಇತಿಹಾಸ ಮತ್ತು ಸಮಾಜಶಾಸ್ತ್ರ ಐಚ್ಛಿಕ ವಿಷಯಗಳನ್ನು ತೆಗೆದುಕೊಂಡಿದ್ದ ಪಾರ್ವತಿ ಅವರು, ಅಲ್ಲಿ ಬಿ.ಎ ವ್ಯಾಸಂಗ ಅಧ್ಯಯನ ಮಾಡಿ ಇಂಗ್ಲಿಷ್ ಮತ್ತು ಇತಿಹಾಸ ಎರಡೂ ವಿಷಯಗಳಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಗಮನ ಸೆಳೆದಿದ್ದರು. ನಂತರ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕಾಗಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದಲ್ಲಿ ಉನ್ನತ ವ್ಯಾಸಂಗ ಮಾಡುವ ಮೂಲಕ 2018 -19 ರ ಬ್ಯಾಚ್ನಲ್ಲಿ ಇಂಗ್ಲಿಷ್ ವಿಭಾಗದಲ್ಲಿ ಅಲ್ಲಿಯೂ ಸಹ ಚಿನ್ನದ ಪದಕ ಗಿಟ್ಟಿಸಿಕೊಳ್ಳುವ ಮೂಲಕ ಇತರೆ ಮಹಿಳೆಯರಿಗೂ ಮಾದರಿಯಾಗಿದ್ದಾರೆ.
ಪಾರ್ವತಿ ಎರಡು ಮಕ್ಕಳ ತಾಯಿ :
ಮಗಳಖೋಡ ಗ್ರಾಮದ ಇಂಗ್ಲಿಷ್ ಉಪನ್ಯಾಸಕ ಪ್ರೊ. ರಾಜಶೇಖರ ಶೇಗುಣಸಿ ಅವರ ಜೊತೆ 2012ರಲ್ಲಿ ಮದುವೆಯಾಗಿದ್ದ ಪಾರ್ವತಿ ಈಗ ಎರಡು ಮಕ್ಕಳ ತಾಯಿ. ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿನ ತಾಯಿಯಾದ ಪಾರ್ವತಿ ಮನಸ್ಸಿನಲ್ಲಿ ಮೂಡಿದ ಆಸೆಯನ್ನು ಹಾಗೇ ಇಟ್ಟುಕೊಂಡಿದ್ದರು. ಶಿಕ್ಷಣವನ್ನು ಮುಂದುವರೆಸುವ ಇಂಗಿತ ವ್ಯಕ್ತಪಡಿಸಿದ ಪಾರ್ವತಿಗೆ ಪತಿ ರಾಜಶೇಖರ್ ಕೂಡ ಬೇಡ ಅನ್ನಲಿಲ್ಲ. ಮೊದಲಿನಿಂದಲೂ ಓದಿನಲ್ಲಿ ಚುರುಕಾಗಿದ್ದ ಪಾರ್ವತಿ ಮುಂದುವರೆಸಿದ ಶಿಕ್ಷಣದಲ್ಲಿ ಬಂಗಾರದ ಪದಕ ಪಡೆಯುವುದರ ಮೂಲಕ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕೀರ್ತಿಯನ್ನು ಕೂಡ ಹೆಚ್ಚಿಸಿದರು.
ಈಟಿವಿ ಭಾರತ ಜೊತೆ ತಮ್ಮ ಅನುಭವ ಹಂಚಿಕೊಂಡಿರುವ ಸಾಧಕಿ ಪಾರ್ವತಿ, ನಾನು ಇನ್ನೂ ಓದಬೇಕು. ಐಎಎಸ್, ಕೆಎಎಸ್ ಅಂತಹ ಪರೀಕ್ಷೆ ಬರೆದು ಉನ್ನತ ಹುದ್ದೆ ಪಡೆಯಬೇಕೆಂದು ತಮ್ಮ ಮುಂದಿನ ಹಾದಿ ಬಗ್ಗೆ ವಿವರಣೆ ನೀಡಿದರು. ಅಲ್ಲದೇ ತನ್ನ ಓದಿಗೆ ಪ್ರೋತ್ಸಾಹ ನೀಡಿದ ತಂದೆ-ತಾಯಿ ಹಾಗೂ ಪತಿಗೆ ಧನ್ಯವಾದ ತಿಳಿಸಿದ ಪಾರ್ವತಿ, ನನ್ನ ಮುಂದಿನ ಕನಸಿಗೆ ಅವರೇ ಮಾರ್ಗದರ್ಶಕರು ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.