ಬೆಳಗಾವಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಅಗ್ನಿಪಥ್ ಯೋಜನೆ ಅಗ್ನಿವೀರ್ ವಾಯು ವಿಭಾಗದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ದೇಶದಲ್ಲೇ ಮೊದಲ ಬಾರಿಗೆ ಬೆಳಗಾವಿ ನಗರದ ಸಾಂಬ್ರಾ ವಾಯು ಸೇನೆ ಕೇಂದ್ರದಲ್ಲಿ ತರಬೇತಿ ಪ್ರಾರಂಭವಾಗಿದೆ.
ದೇಶಾದ್ಯಂತ ಸುಮಾರು 7 ಲಕ್ಷ ಅಭ್ಯರ್ಥಿಗಳಲ್ಲಿ, 2850 ಅಭ್ಯರ್ಥಿಗಳು ಅಗ್ನಿವೀರ್ ವಾಯುಗೆ ಆಯ್ಕೆಯಾಗಿದ್ದು. ಅವರಿಗೆ ಬೆಳಗಾವಿ ವಾಯು ಸೇನೆ ಕೇಂದ್ರದಲ್ಲಿ ಇಂದಿನಿಂದ ತರಬೇತಿ ನೀಡಲಾಗುತ್ತಿದೆ. ಅಭ್ಯರ್ಥಿಗಳಿಗೆ ಸತತ ಆರು ತಿಂಗಳುಗಳ ಕಾಲ ತರಬೇತಿ ನೀಡಲಾಗುತ್ತದೆ. ವಾಯು ಸೇನೆಗೆ ಸಂಬಂಧಿಸಿದ ಹೊಟೆಲ್ ಮ್ಯಾನೇಜ್ಮೆಂಟ್, ಸಾಮಾನ್ಯ ಸೈನಿಕರಿಗೆ ನೀಡೊ ದೈಹಿಕ ತರಬೇತಿ, ಅಥ್ಲೆಟಿಕ್ ನಲ್ಲಿ ದೇಶ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವವರಿಗೆ ತರಬೇತಿ ಮತ್ತು ಜನರಲ್ ಸರ್ವಿಸ್ ಹಾಗೂ ಟ್ರೇಡ್ ಸರ್ವಿಸ್ ಕುರಿತು ಅಗ್ನಿವೀರ್ ವಾಯು ಅಭ್ಯರ್ಥಿಗಳಿಗೆ ಹಿರಿಯ ಅಧಿಕಾರಿಗಳಿಂದ ತರಬೇತಿ ನೀಡುತ್ತಾರೆ.
ಅಗ್ನಿವೀರ್ ವಾಯುನ ನಾಲ್ಕು ವರ್ಷ ಸೇವೆ ಮುಕ್ತಾಯದ ಬಳಿಕ, ವಾಯು ಸೇನೆಯಲ್ಲಿ ಮತ್ತೋಂದು ಅವಕಾಶ ಕಲ್ಪಿಸಲಾಗಿದೆ. ನಾಲ್ಕು ವರ್ಷಗಳಲ್ಲಿ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುವ 25% ಸಿಬ್ಬಂದಿಗೆ, ಇದೇ ಏರ್ ಫೋರ್ಸ್ನಲ್ಲಿ ಮುಂದುವರೆಯಲು ಅವಕಾಶವಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಅಗ್ನಿಪಥ್ ಯೋಜನೆಯ ಹಿನ್ನೆಲೆ: ಭಾರತದ ಭದ್ರತೆಯನ್ನು ಬಲಪಡಿಸಲು ಕೇಂದ್ರ ಸರ್ಕಾರ ಹೊರ ತಂದಿರುವ ಹೊಸ ಯೋಜನೆಯೇ ಅಗ್ನಿಪಥ್. ಇನ್ನು ಮುಂದೆ ಸೇನೆಯ ಮೂರೂ ವಿಭಾಗಗಳಲ್ಲಿ ಸೇವೆ ಸಲ್ಲಿಸುವ ಯುವಕ–ಯುವತಿಯರಿಗೆ ಈ ಅವಕಾಶವನ್ನು ನೀಡುವ ಹಾಗೂ ಮಿಲಿಟರಿಯ ಹೊಸ ನೇಮಕಾತಿ ಮಾದರಿ ಅಗ್ನಿಪಥ್ ಯೋಜನೆ ಜಾರಿಯಾಗಿದೆ.
ಅಗ್ನಿಪಥ್ ದೇಶಭಕ್ತಿ ಮತ್ತು ಪ್ರೇರಿತ ಯುವಕರಿಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ. ಈ ಅಗ್ನಿಪಥ್ ಯೋಜನೆಯಡಿ 4 ವರ್ಷಗಳ ಕಾಲ ಸೇನೆಗೆ ಯುವಕರನ್ನು ನೇಮಿಸಿಕೊಳ್ಳಲಾಗುತ್ತದೆ.
ಅಗ್ನಿಪಥ್ ಯೋಜನೆಗೆ ಯಾರು ಅರ್ಹರು: ಅಗ್ನಿಪಥ್ ಯೋಜನೆಗೆ ಅರ್ಹರಾಗಲು ನಿಮ್ಮ ವಯಸ್ಸು 17 ವರ್ಷದಿಂದ 21 ವರ್ಷಗಳ ನಡುವೆ ಇರಬೇಕು. ಈ ನೇಮಕಾತಿಯಲ್ಲಿ ಸೇನೆಯಂತೆಯೇ ಅದೇ ಪ್ರಕ್ರಿಯೆಯಿಂದ ಆಯ್ಕೆ ಮಾಡಲಾಗುತ್ತದೆ. ಅಂದರೆ ಸೇನೆ ನಿಗದಿಪಡಿಸಿದ ನಿಯಮಗಳ ಪ್ರಕಾರವೇ ನೇಮಕಾತಿ ನಡೆಯಲಿದೆ. ಇದರಲ್ಲಿ ನೇಮಕಾತಿಯ ನಂತರ ತರಬೇತಿ ಅವಧಿ ಸೇರಿದಂತೆ ಒಟ್ಟು 4 ವರ್ಷಗಳ ಕಾಲ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಗುತ್ತದೆ.
ಅಗ್ನಿವೀರರಿಗೆ ಸಂಬಳ ಎಷ್ಟು: ಅಗ್ನಿವೀರರಾದ ಪ್ರತಿಯೊಬ್ಬರಿಗೆ ನಾಲ್ಕು ವರ್ಷದ ಅವಧಿಗೆ ಮಾತ್ರ ವರ್ಷಕ್ಕೆ 4.62 ಲಕ್ಷದಿಂದ 6.92 ಲಕ್ಷದವರೆಗೆ ಸಂಬಳದ ಪ್ಯಾಕೇಜ್ ಇರುತ್ತದೆ. ಅಂದರೆ ತಿಂಗಳಿಗೆ 30 ಸಾವಿರ ರೂಪಾಯಿಗಳಿಂದ 40 ಸಾವಿರವರೆಗೆ ಸಂಬಳ ಸಿಗಲಿದೆ. ಇದರಲ್ಲಿ ಉಚಿತವಾಗಿ ವೈದ್ಯಕೀಯ ವಿಮೆ ದೊರೆಯುತ್ತದೆ. ನಾಲ್ಕು ವರ್ಷ ಸೇವೆ ಸಲ್ಲಿಸಿ ಬಿಡುಗಡೆ ಹೊಂದುವ ಅಗ್ನಿವೀರರಿಗೆ ಸುಮಾರು 11.70 ಲಕ್ಷ ಸೇವಾ ನಿಧಿಯಾಗಿ ಕೊಡಲಾಗುತ್ತದೆ. ಇದಕ್ಕೆ ತೆರಿಗೆ ಇರುವುದಿಲ್ಲ. ಗಮನಿಸಬೇಕಾದ ಅಂಶವೆಂದರೆ ಅಗ್ನಿವೀರರು ನಿವೃತ್ತರಾದ ಮೇಲೆ ಅವರಿಗೆ ಪಿಂಚಣಿ ಇರುವುದಿಲ್ಲ.
ಈ ಯೋಜನೆಯ ಅನುಕೂಲಗಳೇನು: ಇದು ಯುವಕರಿಗೆ ತಮ್ಮ ದೇಶಕ್ಕೆ ಸೇವೆ ಸಲ್ಲಿಸಲು ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಕೊಡುಗೆ ನೀಡಲು ಜೀವಿತಾವಧಿಯಲ್ಲಿ ಒಮ್ಮೆ ಅವಕಾಶವನ್ನು ಒದಗಿಸುತ್ತದೆ. ಸಶಸ್ತ್ರ ಪಡೆಗಳು ಕಿರಿಯ ಮತ್ತು ಹೆಚ್ಚು ರೋಮಾಂಚಕವಾಗಿರುತ್ತವೆ. ಅಗ್ನಿವೀರ್‌ಗಳು ಉತ್ತಮ ಆರ್ಥಿಕ ಪ್ಯಾಕೇಜ್ ಅನ್ನು ಹೊಂದಿದ್ದು, ನಾಗರಿಕ ಸಮಾಜ ಮತ್ತು ಸಂಸ್ಥೆಗಳಲ್ಲಿ ಉತ್ತಮ ಮಿಲಿಟರಿ ನೀತಿಯಲ್ಲಿ ತರಬೇತಿ ನೀಡಲು ಮತ್ತು ಅವರ ಕೌಶಲ್ಯ ಮತ್ತು ಅರ್ಹತೆಗಳನ್ನು ಸುಧಾರಿಸಲು ಅವಕಾಶವಿದೆ. ಇದು ನಾಗರಿಕ ಸಮಾಜದಲ್ಲಿ ಮಿಲಿಟರಿ ನೀತಿಯೊಂದಿಗೆ ಉತ್ತಮ ಶಿಸ್ತಿನ ಮತ್ತು ನುರಿತ ಯುವಕರನ್ನು ನಿರ್ಮಾಣ ಮಾಡುತ್ತದೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಭಾರಿ ಅಗ್ನಿ ಅವಘಡ: 6ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಕರಕಲು