ಬೆಳಗಾವಿ: ಆಧುನಿಕ ತಂತ್ರಜ್ಞಾನವನ್ನು ಪ್ರತಿಯೊಬ್ಬ ಸಿಬ್ಬಂದಿ ಅರಿತುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ವಿದೇಶದಲ್ಲಿ ತರಬೇತಿ ಒದಗಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ನಿಟ್ಟಿನಲ್ಲಿ ಸ್ಕಾಟ್ಲ್ಯಾಂಡ್, ಪೊಲೆಂಡ್, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ಕಡೆ ತರಬೇತಿ ನೀಡಲು ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಚರ್ಚೆ ನಡೆಯುತ್ತಿದೆ ಎಂದರು.
ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಆವರಣದಲ್ಲಿ ನಿರ್ಮಿಸಲಾಗಿರುವ 36 ಪೊಲೀಸ್ ವಸತಿ ಗೃಹಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಮೂರು ವರ್ಷಗಳಲ್ಲಿ 16,000 ಪೊಲೀಸ್ ಸಿಬ್ಬಂದಿ ಹಾಗೂ 1000ಕ್ಕೂ ಅಧಿಕ ಪಿಎಸ್ಐ ನೇಮಕಾತಿ ಗುರಿಯನ್ನು ಸರ್ಕಾರ ಹೊಂದಿದೆ ಎಂದರು.
ತಂತ್ರಜ್ಞಾನ ಬದಲಾದಂತೆ ಅಪರಾಧದ ಸ್ವರೂಪ ಬದಲಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಸೈಬರ್ ಪೊಲೀಸ್ ಠಾಣೆ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು. ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಗೊಳಿಸಲಾಗುತ್ತಿದ್ದು, ಅಪರಾಧಗಳ ತನಿಖೆಯ ಸ್ವರೂಪದಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ತರಲಾಗುತ್ತಿದೆ. ವಿಶ್ವದದಲ್ಲಿಯೇ ಶ್ರೇಷ್ಠ ಪೊಲೀಸ್ ವ್ಯವಸ್ಥೆಯನ್ನಾಗಿ ರೂಪಿಸಲಾಗುವುದು ಎಂದರು.
ಹಳೆ ಠಾಣೆಗಳನ್ನು ಆಧುನೀಕರಣಗೊಳಿಸಲು ಪ್ರಸ್ತಾವ ಸಲ್ಲಿಸಿದರೆ, ಮುಂದಿನ ಬಜೆಟ್ನಲ್ಲಿ ಅಗತ್ಯ ಅನುದಾನ ಒದಗಿಸಲು ಸರ್ಕಾರ ಸಿದ್ಧವಿದೆ. ಪೊಲೀಸ್ ಸಿಬ್ಬಂದಿ ವಿಶಿಷ್ಟವಾದ ಸೇವೆಯಲ್ಲಿ ತೊಡಗಿರುತ್ತಾರೆ. ಅಪಘಾತ, ಅವಘಡ ಮಾತ್ರವಲ್ಲದೇ ಕೌಟುಂಬಿಕ ಜಗಳ ನಡೆದಾಗಲೂ ಪೊಲೀಸರ ಅಗತ್ಯವಿರುತ್ತದೆ. ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಕನಿಷ್ಠಪಕ್ಷ ಅವರ ಕುಟುಂಬ ನೆಮ್ಮದಿಯಿಂದ ಇರುವ ಹಾಗೆ ಸೌಲಭ್ಯ ಒದಗಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಇನ್ನು ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಪೊಲೀಸರ ಜತೆ ಸಹಕರಿಸಿದರೆ, ಶಾಂತಿಯುತ ವಾತಾವರಣ ನಿರ್ಮಿಸಲು ಸಾಧ್ಯವಿದೆ ಎಂದರು.