ಚಿಕ್ಕೋಡಿ: ಟ್ರ್ಯಾಕ್ಟರ್ ಟ್ರೇಲರ್ಗಳ ಡಿಸ್ಕ್ ಸಮೇತ ಗಾಲಿಗಳನ್ನು ಕಳ್ಳತನ ಮಾಡುತ್ತಿದ್ದ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಸ್ತೆ ಬದಿಯಲ್ಲಿ ಹಾಗೂ ಹೊಲದ ಮನೆಗಳಲ್ಲಿ ನಿಲ್ಲಿಸಿದ ಟ್ರ್ಯಾಕ್ಟರ್ ಟ್ರೇಲರ್‌ಗಳನ್ನು ಡಿಸ್ಕ್ ಸಮೇತ ಬರೋಬ್ಬರಿ 46 ಟಾಯರ್ಗಳನ್ನು ಇದುವರೆಗೆ ಕಳ್ಳತನ ಮಾಡಿದ್ದಾರೆ. ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದ ಮಾರುತಿ ಬಸಪ್ಪಾ ಠೊಣ್ಣೆ (24), ಮಹಾದೇವ ಮುರಾರಿ ಮಾಕಾಳೆ (27), ಬಾಬು ಸಿದ್ದಪ್ಪಾ ಡಾಲೆ (37), ಶಿವಾನಂದ ಮಾರುತಿ ಗಜಬರ (29), ಖಾನಾಪೂರ ತಾಲೂಕಿನ ಕಕ್ಕೇರಿ ಗ್ರಾಮದ ಸಂಜು ಬಿಷ್ಟಪ್ಪಾ ಅಂಬಡಗಟ್ಟಿ (28), ಶ್ರಾವಣ ಸೋಮಲಿಂಗ ಹುಲಮನಿ (20), ಖಾನಾಪೂರ ತಾಲೂಕಿನ ಘಸ್ಟೊಳಿ ದಡ್ಡಿ ಗ್ರಾಮದ ಸಂತೋಷ ಯಲ್ಲಪ್ಪಾ ನಾಗಣ್ಣವರ (26) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಂದ ವಿವಿಧ ಕಂಪನಿಯ ಡಿಸ್ಕ್ ಸಮೇತ 46 ಟಾಯರ್ಗಳು, 4.60 ಲಕ್ಷದ ಎರಡು ಟಾಟಾ ಸುಮೋ ವಾಹನ, 4 ಲಕ್ಷದ ಕೆಂಪು ಚೀರಾ ವಾಹನ ಸೇರದಂತೆ ಕಳ್ಳತನಕ್ಕೆ ಬಳಸುವ ಇತರೆ ವಸ್ತುಗಳು ಸೇರಿ ಅಂದಾಜು 8.61 ಲಕ್ಷ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಜಿಲ್ಲೆಯ ಖಡಕಲಾಟ, ನಿಪ್ಪಾಣಿ, ಸದಲಗಾ, ಹುಕ್ಕೇರಿ, ಸಂಕೇಶ್ವರ, ಯಮಕನಮರಡಿ, ಚಿಕ್ಕೋಡಿ, ಅಂಕಲಿ, ಕಿತ್ತೂರ, ಹಾರುಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಕುರಿತು ಪ್ರಕರಣ ದಾಖಲಾಗಿವೆ. ಈ ಸಂಬಂಧ ಖಡಕಲಾಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.