ಬೆಳಗಾವಿ: ಕ್ರಿಪ್ಟೋಕರೆನ್ಸಿ ವ್ಯವಹಾರ ನಡೆಸುತ್ತಿದ್ದ ಹುಬ್ಬಳ್ಳಿಯ ಉದ್ಯಮಿ ಅಪಹರಣ ಪ್ರಕರಣ ಸಂಬಂಧ ಬೆಳಗಾವಿ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ಯೂನೂಸ್ ಖಾಜಿಗಾಗಿ ಶೋಧಕಾರ್ಯ ಮುಂದುವರೆದಿದೆ.
ಮಹಾರಾಷ್ಟ್ರದ ಸಾಂಗಲಿಯ ಶಹನವಾಜ್ ಚಮನಶೇಖ್, ಅಜ್ಜು ಚಮನಶೇಖ್, ಅಭಿಷೇಕ ಶೆಟ್ಟಿ ಬಂಧಿತರು. ಮಹಾರಾಷ್ಟ್ರದಲ್ಲಿ ತಲೆಮರಿಸಿಕೊಂಡಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಮೂಲಕ ಉದ್ಯಮಿ ರವಿಕಿರಣ್ ಭಟ್ ಅಪಹರಣ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಬಿಟ್‌ಕಾಯಿನ್ ವ್ಯವಹಾರದಲ್ಲಿ ವಂಚನೆ ಹಿನ್ನೆಲೆಯಲ್ಲಿ ಅಪಹರಣ ಶಂಕೆ ವ್ಯಕ್ತವಾಗಿದೆ. ಕಿಡ್ನ್ಯಾಪ್ ಆಗಿದ್ದ ಉದ್ಯಮಿ ರವಿಕಿರಣ್ ಭಟ್ ವಿರುದ್ಧ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ ಕರಮಾಳಾದ ಬಂಧನ್ ಬ್ಯಾಂಕ್‌ನ ಮಾಜಿ ಮ್ಯಾನೇಜರ್ ರಾಹುಲ್ ಮುಂಡೆ ವಂಚನೆ ಆರೋಪ ಮಾಡಿದ್ದರು.
ಬಿಟ್ಕಾಯಿನ್ನಲ್ಲಿ ಹೂಡಿಕೆ ಮಾಡಿ ಹಣ ಡಬಲ್ ಮಾಡಿಕೊಡುವುದಾಗಿ ರವಿಕಿರಣ್ ಭಟ್ ವಂಚಿಸಿದ್ದಾನೆ ಎನ್ನಲಾಗಿದೆ. ಅಪಹರಣ ಪ್ರಕರಣದ ಪ್ರಮುಖ ಆರೋಪಿ ಶಹನವಾಜ್ ಹಾಗೂ ಉದ್ಯಮಿ ರವಿಕಿರಣ್ ಇಬ್ಬರೂ ಪರಿಚಯಸ್ಥರು. ಬಿಟ್ಕಾಯಿನ್ನಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ಮಾಡಿ ಕೊಡುವುದಾಗಿ ವಂಚನೆ ಮಾಡಿದ ಹಿನ್ನೆಲೆಯಲ್ಲಿ ಅಪಹರಣ ಶಂಕೆ ವ್ಯಕ್ತವಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.