ಬೆಳಗಾವಿ: ಮಟಕಾ ಪ್ರಕರಣ ದಾಖಲಿಸುವುದಾಗಿ ಹೆದರಿಸಿ ಲಂಚ ಪಡೆಯುತ್ತಿದ್ದ ಖಾನಾಪುರ ಪೊಲೀಸ್ ಠಾಣೆಯ ಇಬ್ಬರು ಕಾನ್ಸ್ಟೇಬಲ್ಗಳು ಭ್ರಷ್ಟಾಚಾರ ನಿರ್ಮೂಲನಾ ದಳ (ಎಸಿಬಿ)ದ ಬಲೆಗೆ ಬಿದ್ದಿದ್ದಾರೆ.
ಕಾನಸ್ಟೇಬಲ್ಗಳಾದ ಸಿದ್ಧು ಮೊಕಾಶಿ ಮತ್ತು ವಿಠ್ಠಲ ಚಿಪ್ಪಲಕಟ್ಟಿ ರೂ.15,000 ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಕಳೆದ ಶುಕ್ರವಾರ ಕೆಲಸಕ್ಕೆಂದು ಖಾನಾಪುರಕ್ಕೆ ಹೋಗಿದ್ದ ಬೆಳಗಾವಿಯ ಪರಶುರಾಮ ಗಾಡಿವಡ್ಡರ ಮೇಲೆ ಮಟಕಾ ಪ್ರಕರಣ ದಾಖಲಿಸುವುದಾಗಿ ಇಬ್ಬರೂ ಹೆದರಿಸಿದ್ದರು. ಪ್ರಕರಣ ದಾಖಲಿಸದೆ ಇರಲು ರೂ. 50,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ ರೂ.15,000 ಕ್ಕೆ ವ್ಯವಹಾರ ಕುದುರಿಸಿದ್ದರು ಎನ್ನಲಾಗ್ತಿದೆ.
ಇದನ್ನೂ ಓದಿ: ಮಂಜುವಿರಟ್ಟು ಸ್ಪರ್ಧೆ ವೀಕ್ಷಿಸಲು ಬಂದ ವ್ಯಕ್ತಿಗೆ ಹೋರಿ ತಿವಿದು ಸಾವು
ಲಂಚ ಕೇಳಿದ್ದಕ್ಕೆ ಸಂಬಂಧಪಟ್ಟಂತೆ ಪರಶುರಾಮ ಗಾಡಿವಡ್ಡರ ಸೋಮವಾರ ಎಸಿಬಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿ ಕಾರ್ಯಾಚರಣೆ ನಡೆಸಿರುವ ಎಸಿಬಿ ಅಧಿಕಾರಿಗಳು, ಲಂಚ ಪಡೆಯುವಾಗ ದಾಳಿ ನಡೆಸಿ ಇಬ್ಬರೂ ಕಾನ್ಸ್ಟೇಬಲ್ಗಳನ್ನು ಇಂದು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ.
ಎಸಿಬಿ ಎಸ್ಪಿ ಬಿ. ಎಸ್. ನೇಮಗೌಡ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಕರುಣಾಕರ ಶೆಟ್ಟಿ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಅಡಿವೇಶ ಗುದಿಗೊಪ್ಪ ಹಾಗೂ ಸುನಿಲಕುಮಾರ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.