ಬೆಳಗಾವಿ: ಕೋವಿಡ್ ಅವ್ಯವಹಾರ ಮಾಡುವುದು ದೇವರಿಗೆ ಮೋಸ ಮಾಡಿದ ಹಾಗೆ. ಹೀಗಾಗಿ ರಾಜ್ಯದಲ್ಲಿ ಅಕ್ರಮ ಎಸಗುವ ಅಧಿಕಾರಿಗಳನ್ನು ಮುಲಾಜಿಲ್ಲದೆ ತೆಗೆದುಹಾಕುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕಲಬರುಗಿಯಲ್ಲಿ ಪ್ರವಾಸ ಮಾಡಿ ಹಾನಿಯಾದ ಕುಟುಂಬಗಳಿಗೆ ಪರಿಹಾರ ನೀಡಿ ಬಂದಿದ್ದೇನೆ. ಇಂದು ಬೆಳಗಾವಿಯಲ್ಲಿಯೂ ಸಹ ಪರಿಶೀಲನೆ ನಡೆಸಲಿದ್ದೇನೆ. ಪರಿಹಾರ ಕೇಂದ್ರದಲ್ಲಿ ಸೂಕ್ತವಾದ, ಗುಣಮಟ್ಟದ ಆಹಾರ ನೀಡಬೇಕು. ಕಾಳಜಿ ಕೇಂದ್ರದಲ್ಲಿ ಯಾರೂ ಜಾತಿಯತೆ ಮಾಡದೆ ಅವರನ್ನು ಸೂಕ್ತ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಪ್ರವಾಹದಿಂದಾಗಿ ಸುಮಾರು 3 ಸಾವಿರ ಕೋಟಿಗೂ ಅಧಿಕ ಹಾನಿಯಾಗಿದೆ. 500 ಜಾನುವಾರು ಮೃತಪಟ್ಟಿವೆ. 8000 ಜನರು ಪರಿಹಾರ ಕೇಂದ್ರದಲ್ಲಿ ವಾಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಪರಿಹಾರ ಕಾರ್ಯ ಕೈಗೊಳ್ಳಲು ಅನುದಾನದ ಕೊರತೆ ಇಲ್ಲ. ಈಗಾಗಲೇ ಬೆಳಗಾವಿ ಜಿಲ್ಲೆಗೆ 88 ಕೋಟಿ, ಕಲಬುರಗಿಗೆ 20 ಕೋಟಿ ಹಾಗೂ ಯಾದಗಿರಿಗೆ 16 ಕೋಟಿ, ಬಾಗಲಕೋಟೆಗೆ 33 ಕೋಟಿ, ಕೊಡಗು ಜಿಲ್ಲೆಗೆ 68 ಕೋಟಿ ಹಣ ಮೀಸಲು ಇಡಲಾಗಿದೆ. ಒಟ್ಟಾರೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಒಟ್ಟು 666 ಕೋಟಿ ರೂ. ಹಣ ಇದೆ. ಪರಿಹಾರ ಕಾರ್ಯಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.