ಅಥಣಿ: ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಸ್ವಕ್ಷೇತ್ರ ಅಥಣಿ ತಾಲೂಕಿನ ಆರ್.ಸಿ. ಜುಂಜರವಾಡ ಗ್ರಾಮಕ್ಕೆ ಸೂಕ್ತ ಸಾರಿಗೆ ಸಂಚಾರವಿಲ್ಲವೆಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಆಲಮಟ್ಟಿ ಹಿನ್ನೀರಲ್ಲಿ ಮುಳುಗಡೆಯಾದ ಹಿನ್ನೆಲೆ 1999ರಲ್ಲಿ ಸರ್ಕಾರ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ಕೃಷ್ಣಾ ನದಿ ದಂಡೆಯ ಬಳಿ ಇರುವ ಜುಂಜರವಾಡ ಗ್ರಾಮದಲ್ಲಿ ಪುನರ್ವಸತಿ ಕೇಂದ್ರ ನಿರ್ಮಾಣ ಮಾಡಿತ್ತು. ಕೃಷ್ಣಾ ನದಿ ದಂಡೆಯಿಂದ ಜುಂಜರವಾಡ ಗ್ರಾಮದ ಪುನರ್ವಸತಿ ಕೇಂದ್ರ ಸರಿಸುಮಾರು ಎಂಟು ಕಿಲೋ ಮೀಟರ್ ಅಂತರವಿದೆ.
ಈ ಬಾರಿ ಪಶ್ಚಿಮಘಟ್ಟದಲ್ಲಿ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಕೃಷ್ಣಾ ನದಿ ಪ್ರವಾಹ ಪರಿಸ್ಥಿತಿ ಉಂಟಾದ ಸಂದರ್ಭದಲ್ಲಿ ಈ ಪುನರ್ವಸತಿ ಕೇಂದ್ರಕ್ಕೆ ಜನರನ್ನೂ ಸ್ಥಳಾಂತರ ಮಾಡಲಾಗಿತ್ತು. ಪ್ರವಾಹ ಪರಿಸ್ಥಿತಿ ಕಡಿಮೆಯಾದ ಬೆನ್ನಲ್ಲೇ ಕೃಷ್ಣಾ ನದಿ ದಂಡೆಯ ಜುಂಜರವಾಡ ಗ್ರಾಮಕ್ಕೆ ಜನರು ಮರಳಿ ತಮ್ಮ ನಿವಾಸಕ್ಕೆ ತೆರಳಿದ್ದು, ಇನ್ನು ಕೆಲವಷ್ಟು ಜನ ಪುನರ್ವಸತಿ ಕೇಂದ್ರ ಆರ್.ಸಿ ಸೆಂಟರ್ನಲ್ಲಿ ಇದ್ದಾರೆ.
ಪುನರ್ವಸತಿ ಕೇಂದ್ರ ಮತ್ತು ಕೃಷ್ಣಾ ನದಿ ದಂಡೆ ಜುಂಜರವಾಡ ಗ್ರಾಮಕ್ಕೆ ಸದ್ಯ ಈಗ ಬಸ್ಸಿನ ವ್ಯವಸ್ಥೆ ಇಲ್ಲದಿರುವುದರಿಂದ ಪಂಚಾಯಿತಿ ಕಾರ್ಯಕ್ಕೆ ಹಾಗೂ ರೇಷನ್ ಇತ್ಯಾದಿ ಸಾಮಗ್ರಿಗಳು ಮತ್ತು ಗದ್ದೆಗಳಿಗೆ ನಡೆದುಕೊಂಡು ಬರಬೇಕಾದ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಇಲ್ಲಿನ ಸ್ಥಳೀಯರು ಸಾರಿಗೆ ಸಚಿವರು ಬಸ್ಸಿನ ವ್ಯವಸ್ಥೆಯನ್ನು ಆದಷ್ಟು ಬೇಗ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.