ಅಥಣಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅಧಿಕಾರಿಗಳ ಜೊತೆ ಪಟ್ಟಣದಲ್ಲಿ ಪರಿಶೀಲನಾ ಸಭೆ ನಡೆಸಿದರು.
ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು, ಕೋವಿಡ್-19 ಹರಡದಂತೆ ಸರ್ಕಾರ ಹಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದೆ. ದೆಹಲಿಯ ಮರ್ಕಜ್ನಿಂದ ಬಂದವರಿಂದ ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅಥಣಿ ಗೋಕಾಕ್ ನಲ್ಲಿ ಯಾವುದೇ ಪ್ರಕರಣ ಕಂಡುಬಂದಿಲ್ಲ. ಆದ್ರೆ, ಮುಂಜಾಗ್ರತೆ ವಹಿಸಿ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಮದ್ಯ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ, ಮೇ 3 ವರೆಗೆ ಯಾವುದೇ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲವೆಂದು ಸಿಎಂ ತಿಳಿಸಿದ್ದಾರೆ. ಮುಂದಿನ ಆದೇಶದವರೆಗೆ ಮದ್ಯ ಮಾರಾಟ ಸಾಧ್ಯವಿಲ್ಲ. ಮದ್ಯದ ಅಂಗಡಿಗಳ ಕಳ್ಳತನವನ್ನ ಮಾಲೀಕರೇ ಮಾಡುತ್ತಿದ್ದಾರೆ ಎಂದು ಆಘಾತಕಾರಿ ವಿಷಯ ಹೊರಹಾಕಿದರು.
ಅಬಕಾರಿ ಅಧಿಕಾರಿಗಳು ಮದ್ಯದ ಅಂಗಡಿ ಮುಚ್ಚಿದ ದಿನದಿಂದ ಇಂದಿನವರೆಗೆ ಶೇಖರಣೆ ಎಷ್ಟಿದೆ ಎಂದು ಪರಶೀಲನೆ ಮಾಡುವುದಕ್ಕೆ ಆದೇಶ ನೀಡುತ್ತೇನೆ ಎಂದರು. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಮತ್ತು ಕೃಷಿಗೆ ಯಾವುದೇ ತೊಂದರೆಯಾಗದಂತೆ ನೀರು ಬಿಡುಗಡೆಗೆ ಹಾಗೂ ನೀರು ಸರಬರಾಜಿಗೆ ಅಧಿಕಾರಿಗಳ ಜತೆ ಸಭೆ ನಡೆಸಿ ಸೂಚಿಸಿದ್ದೇನೆ ಎಂದು ಸಚಿವರು ಮಾಹಿತಿ ನೀಡಿದರು.