ಬೆಳಗಾವಿ/ಬೆಂಗಳೂರು: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಪ್ರಮುಖ ಯೋಜನೆಯಾಗಿದೆ. ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಸಾಕಷ್ಟು ಹೆಚ್ಚಳ ಕಂಡುಬಂದಿದೆ. ಯೋಜನೆಗೆ ನಿರೀಕ್ಷೆಗೂ ಮೀರಿ ಮಹಿಳಾ ಸಮುದಾಯದಿಂದ ಪ್ರತಿಕ್ರಿಯೆ ಬಂದಿದೆ. ಹಾಗಾಗಿ ಸರ್ಕಾರ ಬಜೆಟ್ನಲ್ಲಿ ಮೀಸಲಿಟ್ಟಿದ್ದ ಹಣ ಸಾಲದಾಗದ ಪರಿಸ್ಥಿತಿ ಎದುರಾಗಿದ್ದು, ಹೆಚ್ಚುವರಿ ಅನುದಾನವನ್ನು ಒದಗಿಸಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಮಹಿಳೆಯರ ಉಚಿತ ಪ್ರಯಾಣಕ್ಕೆ ಬಜೆಟ್ನಲ್ಲಿ ಮೀಸಲಿಟ್ಟಿದ್ದ 2800 ಕೋಟಿ ರೂ.ಗಳ ಜೊತೆಗೆ ಹೆಚ್ಚುವರಿಯಾಗಿ ಒಂದೂವರೆ ಸಾವಿರ ಕೋಟಿ ರೂ.ಗಳ ಅನುದಾನವನ್ನು ಸರ್ಕಾರ ಮಂಜೂರು ಮಾಡಬೇಕಾದ ಸಂದಿಗ್ಧತೆಗೆ ಸಿಲುಕಿದೆ.
ಕಾಂಗ್ರೆಸ್ ನೀಡಿದ್ದ ಭರವಸೆಯಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಶಕ್ತಿ ಯೋಜನೆ ಜಾರಿಗೆ ತರಲಾಗಿದೆ. ಜೂನ್ 11 ರಿಂದ ಆರಂಭವಾಗಿರುವ ಈ ಯೋಜನೆಯು ನವೆಂಬರ್ 30ರ ವರೆಗಿನ ಅಂಕಿ ಅಂಶಗಳಲ್ಲಿ 105.57 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇದರಲ್ಲಿ ಕೆಎಸ್ಆರ್ಟಸಿಯಲ್ಲಿ 31.69 ಕೋಟಿ, ಬಿಎಂಟಿಸಿಯಲ್ಲಿ 34.25 ಕೋಟಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 24.56 ಕೋಟಿ ಹಾಗು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 15.06 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ.
ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್ ದರವನ್ನು ಸರ್ಕಾರ ಭರಿಸಬೇಕಿದ್ದು, ಅದರಂತೆ ಯೋಜನೆ ಜಾರಿಯಾದ ದಿನದಿಂದ ನವೆಂಬರ್ 30ರ ವರೆಗೆ ಕೆಎಸ್ಆರ್ಟಿಸಿಗೆ 625.11 ಕೋಟಿ, ಬಿಎಂಟಿಸಿಗೆ 294.65 ಕೋಟಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 417.46 ಕೋಟಿ ಹಾಗು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 332.21 ಕೋಟಿ ಸೇರಿ ಒಟ್ಟು ನಾಲ್ಕು ನಿಗಮಗಳಿಗೆ 1669.45 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ. ಇದು ಕೂಡ ಮಹಿಳಾ ಪ್ರಯಾಣಿಕರು ಪ್ರಯಾಣಿಸಿರುವ ಟಿಕೆಟ್ ದರದ ಒಟ್ಟು ಮೊತ್ತದಲ್ಲಿ ಶೇ. 66.5 ರಷ್ಟು ಮಾತ್ರ ಆಗಿದ್ದು, ಇನ್ನು ಶೇ.33.5 ರಷ್ಟು ಬಾಕಿಯನ್ನು ಸರ್ಕಾರ ಸಾರಿಗೆ ನಿಗಮಗಳಿಗೆ ಪಾವತಿ ಮಾಡಬೇಕಿದೆ.
ಸದ್ಯ ಕೆಎಸ್ಆರ್ಟಿಸಿಗೆ ಶೇ.66, ಬಿಎಂಟಿಸಿಗೆ ಶೇ.66.79,ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಶೇ.66.13 ಹಾಗು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ಶೇ.66.18 ರಷ್ಟು ಹಣವನ್ನು ಸರ್ಕಾರ ಪಾವತಿ ಮಾಡಿದ್ದು, ಉಳಿದ ಹಣವನ್ನು ಸದ್ಯೆದಲ್ಲೇ ಪಾವತಿ ಮಾಡುವ ಆಶ್ವಾಸನೆ ನೀಡಿದೆ. ಪ್ರಸಕ್ತ ವರ್ಷ 2800 ಕೋಟಿ ಅನುದಾನವನ್ನು ಶಕ್ತಿ ಯೋಜನೆಗೆ ಒದಗಿಸಿದ್ದು ವಾಸ್ತವಿಕ ವೆಚ್ಚದ ಆಧಾರದಲ್ಲಿ ತಿಂಗಳವಾರು ಅನುದಾನವನ್ನು ಸಾರಿಗೆ ನಿಗಮಗಳಿಗೆ ಸರ್ಕಾರದಿಂದ ಬಿಡುಗಡೆ ಮಾಡಲಾಗುತ್ತಿದೆ. ಅದರಂತೆ ಬಾಕಿ ಹಣವನ್ನು ಸರ್ಕಾರ ಪಾವತಿ ಮಾಡಲಿದೆ.
ಸದ್ಯ ಯೋಜನೆ ಜಾರಿಯಾಗಿ ಕೇವಲ ಐದು ತಿಂಗಳಿಗೆ 1669.45 ಕೋಟಿ ಹಣವನ್ನು ಸರ್ಕಾರ ಸಾರಿಗೆ ನಿಗಮಗಳಿಗೆ ಪಾವತಿ ಮಾಡಿದೆ. ಅದು ಕೂಡ ಶೇ.66.5ರಷ್ಟು ಮಾತ್ರವಾಗಿದ್ದು ಇನ್ನು ಶೇ.33.5ರಷ್ಟು ಅಂದರೆ 800 ಕೋಟಿಯಷ್ಟು ಹಣ ಪಾವತಿ ಮಾಡಬೇಕಿದೆ ಅಲ್ಲಿಗೆ 2469 ಕೋಟಿ ಹಣವಾಗಿದೆ. ಆದರೆ ಆರ್ಥಿಕ ವರ್ಷ ಮುಕ್ತಾಯಕ್ಕೆ ಇನ್ನು 4 ತಿಂಗಳು ಬಾಕಿ ಇದೆ, ಬಜೆಟ್ ನಲ್ಲಿ ಕೊಟ್ಟಿರುವುದೇ 2800 ಕೋಟಿ ಅದರಲ್ಲಿ ಈಗಾಗಲೇ ಬಹುತೇಕ ಖಾಲಿಯಾಗಿದೆ. ಉಳಿದ ನಾಲ್ಕು ತಿಂಗಳಿಗೆ ಹೆಚ್ಚುವರಿ ಅನುದಾನದ ಅನಿವಾರ್ಯತೆ ಎದುರಾಗಿದೆ.
ಇದೀಗ ಜೂನ್ 2023 ರಿಂದ 2024ರ ಮಾರ್ಚ್ ಅಂತ್ಯದವರೆಗೆ ಶಕ್ತಿ ಯೋಜನೆಗೆ ವಾಸ್ತವಿಕ ವೆಚ್ಚವನ್ನು 2800 ಕೋಟಿಯಿಂದ 4377.96 ಕೋಟಿ ಎಂದು ಅಂದಾಜಿಸಲಾಗಿದೆ. ಹಾಗಾಗಿ ಪ್ರಸ್ತುತ 2023-24ನೇ ಸಾಲಿನ ಆಯುವ್ಯಯದಲ್ಲಿ ಶಕ್ತಿ ಯೋಜನೆಗೆ ಒದಗಿಸಲಾಗಿರುವ 2800 ಕೋಟಿ ರೂ.ಗಳ ಅನುದಾನ ಹೊರತುಪಡಿಸಿ ಹೆಚ್ಚುವರಿಯಾಗಿ 1577.96 ಕೋಟಿ ರೂ.ಗಳನ್ನು ಒದಗಿಸುವ ಪ್ರಸ್ತಾಪನೆಯನ್ನು ಸಾರಿಗೆ ಇಲಾಖೆ ಸರ್ಕಾರಕ್ಕೆ ಕಳುಹಿಸಿದ್ದು, ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊರೆ ಹೆಚ್ಚಾಗಿದ್ದು, ಇದೀಗ ಶಕ್ತಿ ಯೋಜನೆಗೆ ಮತ್ತಷ್ಟು ಹೆಚ್ಚುವರಿ ಅನುದಾನ ನೀಡಬೇಕಿರುವುದು ಸರ್ಕಾರಕ್ಕೆ ಮತ್ತಷ್ಟು ಆರ್ಥಿಕ ಹೊರೆ ಹೆಚ್ಚಿಸಲಿದೆ.
ಓದಿ: ಲೋಕಸಭೆ ಕಲಾಪಕ್ಕೆ ಯುವಕರಿಬ್ಬರು ನುಗ್ಗಿದ ಪ್ರಕರಣ; ಐವರು ಆರೋಪಿಗಳ ಬಂಧನ