ಬೆಳಗಾವಿ : ಕೋವಿಡ್ ಹಿನ್ನೆಲೆ ಬಂದ್ ಆಗಿದ್ದ ಜಿಲ್ಲೆಯ 4 ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಆದೇಶ ಹೊರಡಿಸಿದ್ದಾರೆ. ಆದರೆ, ಮಹಾರಾಷ್ಟ್ರದಲ್ಲಿ ಅಪಾರ ಭಕ್ತಗಣ ಹೊಂದಿರುವ ಸವದತ್ತಿಯ ಶ್ರೀ ರೇಣುಕಾ ದೇವಿ ದೇವಸ್ಥಾನ ಸದ್ಯಕ್ಕೆ ತೆರೆಯದಿರಲು ಜಿಲ್ಲಾಡಳಿತ ನಿರ್ಧರಿಸಿದೆ.
ಉಳಿದಂತೆ ಸವದತ್ತಿಯ ಜೋಗುಳಬಾವಿ ಸತ್ಯಮ್ಮದೇವಿ ದೇವಸ್ಥಾನ, ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕದೇವಿ ದೇವಸ್ಥಾನ, ಹುಕ್ಕೇರಿ ತಾಲೂಕಿನ ಬಡಕುಂದ್ರಿ ಹೊಳೆಯಮ್ಮದೇವಿ ದೇವಸ್ಥಾನ ಹಾಗೂ ಕಾಗವಾಡ ತಾಲೂಕಿನ ಮಂಗಸೂಳಿ ಮಲ್ಲಯ್ಯ ದೇವಸ್ಥಾನ ತೆರೆಯಲು ಅನುಮತಿಸಲಾಗಿದೆ.
ನಾಳೆಯಿಂದ ದೇವಸ್ಥಾನಗಳಿಗೆ ಭಕ್ತರ ಪ್ರವೇಶಕ್ಕೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಆದರೆ, ಸವದತ್ತಿ ಶ್ರೀರೇಣುಕಾ ದೇವಿ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿದೆ. ಕಳೆದ 18 ತಿಂಗಳಿಂದ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಬಂದ್ ಆಗಿದೆ. ಜನಸಂದಣಿ ಆಗುವಂತಹ ಉತ್ಸವ, ಜಾತ್ರೆ ಕಾರ್ಯಕ್ರಮ ನಡೆಸದಂತೆ ಷರತ್ತು ವಿಧಿಸಿ ಡಿಸಿ ಎಂ ಜಿ ಹಿರೇಮಠ ಆದೇಶ ಹೊರಡಿಸಿದ್ದಾರೆ.