ಬೆಳಗಾವಿ: ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಬೆಂಗಳೂರಿಂದ ಗೋಕಾಕ್‌ಗೆ ಬಂದಿದ್ದ ಟೆಕ್ಕಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಬೆಳಗಾವಿ ಜಿಲ್ಲೆ ಗೋಕಾಕ್‌ನ 27 ವರ್ಷದ ಟೆಕ್ಕಿಗೆ ಕೊರೊನಾ ದೃಢಪಟ್ಟಿದೆ. ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಟೆಕ್ಕಿ ವಿರುದ್ಧ ಕೇಸ್ ದಾಖಲಿಸುವಂತೆ ಗೋಕಾಕ್ ತಹಶೀಲ್ದಾರ್ ಪ್ರಕಾಶ್ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಟೆಕ್ಕಿ ಕಾರ್ಯನಿರ್ವಹಿಸುತ್ತಿದ್ದರು. ಬೆಂಗಳೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಜತೆಗೆ ಒಂದೇ ರೂಂನಲ್ಲಿ ಟೆಕ್ಕಿ ವಾಸವಿದ್ದರು. ಟೆಕ್ಕಿಯ ರೂಮೇಟ್ ಆಗಿದ್ದ ಪೊಲೀಸ್ ಪೇದೆಗೆ ಕೆಲ ದಿನಗಳ ಹಿಂದೆಯೇ ಕೊರೊನಾ ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವ್ಯಾಬ್ ಪಡೆದು ಹೋಮ್ ಕ್ವಾರಂಟೈನ್‌ಗೆ ಸೂಚಿಸಲಾಗಿತ್ತು. ಆದರೂ ನಿಯಮ ಉಲ್ಲಂಘಿಸಿ ಟೆಕ್ಕಿ ಬೆಂಗಳೂರಿಂದ ಗೋಕಾಕ್‌ಗೆ ಬಂದಿದ್ದರು.
ಇದೀಗ ಟೆಕ್ಕಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಯುವಕ ವಾಸವಿದ್ದ ಗೋಕಾಕಿನ ಬಸವ ನಗರದ ಮನೆಯ 50 ಮೀಟರ್ ವ್ಯಾಪ್ತಿಯಲ್ಲಿ ಸೀಲ್‌ಡೌನ್ ಮಾಡಲಾಗಿದೆ. ಈವರೆಗೂ ಗೋಕಾಕ್‌ನಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ 11 ಜನರ ವಿರುದ್ಧ ಕೇಸ್ ದಾಖಲಿಸಲಾಗಿದೆ.