ಚಿಕ್ಕೋಡಿ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ 13,800 ಸರ್ಕಾರಿ ಶಾಲೆಗಳನ್ನು ವಿಲೀನ ಮಾಡುವುದಾಗಿ ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದರು. ಇದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಶಿಕ್ಷಕರೊಬ್ಬರಿಗೆ ಕಾರಣ ಕೇಳಿ ಚಿಕ್ಕೋಡಿ ಡಿಡಿಪಿಐ ನೋಟಿಸ್ ನೀಡಿದ್ದಾರೆ. ಸಾರ್ವಜನಿಕ ವಲಯದಲ್ಲಿ ಇದು ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿಯ ಅಂಬೇಡ್ಕರ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವೀರಣ್ಣ ಮಡಿವಾಳರ ಎಂಬುವವರಿಗೆ ನೋಟಿಸ್ ನೀಡಲಾಗಿದೆ. ಚಿಕ್ಕೋಡಿ ಡಿಡಿಪಿಐ ಎಂ.ಎಲ್. ಹಂಚಾಟೆ ಅವರು ಕಾರಣ ಕೇಳಿ ಜು.22ರಂದು ನೋಟಿಸ್ ಜಾರಿಗೊಳಿಸಿದ್ದಾರೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರು 13,800 ಸರ್ಕಾರಿ ಶಾಲೆಗಳ ವಿಲೀನ ಕುರಿತು ಇತ್ತೀಚೆಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದರು.
ಇದನ್ನು ವಿರೋಧಿಸಿದ ಶಿಕ್ಷಕ ವೀರಣ್ಣ ಮಡಿವಾಳ ಎಂಬುವವರು "ಇದು 13,800 ಶಾಲೆಗಳ ವಿಲೀನವಲ್ಲ. ಅಷ್ಟು ಶಾಲೆಗಳ ಹತ್ಯಾಕಾಂಡ", ಸರ್ಕಾರಿ ಶಾಲೆಗಳ ಮಕ್ಕಳ ಭವಿಷ್ಯದ ಮಾರಣಹೋಮ", ಎಂಬ ಅಭಿಪ್ರಾಯವನ್ನ ಸಾಮಾಜಿಕ ಜಾಲತಾಣದಲ್ಲಿ (ಫೇಸ್‌ಬುಕ್) ಹರಿಬಿಟ್ಟಿದ್ದರು. ಇದೇ ಕಾರಣಕ್ಕೆ ಚಿಕ್ಕೋಡಿ ಡಿಡಿಪಿಐ ನೋಟಿಸ್ ನೀಡಿದ್ದು, 'ಇದು ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ಕ್ಕೆ ವ್ಯತಿರಿಕ್ತವಾಗಿದೆ. ನಡತೆ ನಿಯಮಗಳು 1966ರ ನಿಯಮ 3 ಅನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ನಿಮ್ಮ ಮೇಲೆ ಯಾಕೆ ಕ್ರಮ ಜರುಗಿಸಬಾರದು. 3 ದಿನಗಳಲ್ಲಿ ಉತ್ತರ ನೀಡಬೇಕೆಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸಲು ಸರ್ಕಾರ ನಿರ್ಧಾರ: ಸಚಿವ ಬಿ.ಸಿ ನಾಗೇಶ್
ಈ ಬಗ್ಗೆ ಪ್ರತಿಕ್ರಿಯಿಸಿದ ವೀರಣ್ಣ ಮಡಿವಾಳರ, ನನಗೆ ಯಾರನ್ನೂ ವಿರೋಧಿಸುವ ಅಥವಾ ಪ್ರತಿಭಟಿಸುವ ಉದ್ದೇಶವಿಲ್ಲ. ಸರ್ಕಾರಿ ಶಾಲೆಗಳು ಮುಚ್ಚುತ್ತವೆ ಎಂಬ ಆತಂಕದಿಂದ ನನ್ನ ಸಂವೇದನೆಯನ್ನು ಎರಡು ಸಾಲಿನ ಪದ್ಯದಲ್ಲಿ ವ್ಯಕ್ತಪಡಿಸಿದ್ದೇನಷ್ಟೇ ಎಂದು ತಿಳಿಸಿದ್ದಾರೆ.