ಬೆಳಗಾವಿ : ರಾಜ್ಯ ವಿಧಾನಸಭೆ ಚುನಾವಣೆಗೆ ಕೇವಲ ಒಂದೇ ವರ್ಷ ಬಾಕಿ ಇದೆ. ರಾಜ್ಯದಲ್ಲಿ ಸ್ವತಂತ್ರವಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿ ಹೈಕಮಾಂಡ್ ಮೆಗಾ ಪ್ಲ್ಯಾನ್ ಮಾಡಿದೆ. ರಾಜ್ಯದ 30 ಕ್ಷೇತ್ರಗಳಲ್ಲಿರುವ ಬಿಜೆಪಿಯ ಹಾಲಿ ಶಾಸಕರಿಗೆ ಕೋಕ್ ನೀಡಿ, ಹೊಸ ಮುಖಗಳಿಗೆ ಟಿಕೆಟ್ ನೀಡಲು ಗಂಭೀರ ಚಿಂತನೆ ಪಕ್ಷದಲ್ಲಿ ನಡೆದಿವೆ ಎಂದು ಬಿಜೆಪಿ ಉನ್ನತ ಮೂಲಗಳು ಖಚಿತ ಪಡಿಸಿವೆ.
ಕೇಂದ್ರ ಗೃಹಸಚಿವ ಅಮಿತ್ ಶಾ ಸೂಚನೆ ಮೇರೆಗೆ ಖಾಸಗಿ ಏಜೆನ್ಸಿಯ 150 ಸದಸ್ಯರು ರಾಜ್ಯದಲ್ಲಿ ಠಿಕಾಣಿ ಹೂಡಿ ಸಮೀಕ್ಷೆ ನಡೆಸಿದ್ದಾರೆ. ಮೇ 1ರಂದು ರಾಜ್ಯಕ್ಕೆ ಭೇಟಿ ನೀಡಿದ್ದ ಈ ತಂಡ ಮೇ 15ರವರೆಗೆ ಪ್ರತಿ ವಿಧಾನಸಭೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಬಳಿಕ ಈ ತಂಡ ಗೌಪ್ಯವಾಗಿ ನಡೆದ ಸಮೀಕ್ಷಾ ವರದಿಯನ್ನು ಕೇಂದ್ರ ಸಚಿವ ಅಮಿತ್ ಶಾಗೆ ಸಲ್ಲಿಸಿದೆ.
ಹಾಲಿ ಶಾಸಕರಿಗೆ ಕೋಕ್ : ಆಪರೇಶನ್ ಕಮಲದ ಮೂಲಕ ಬಿಜೆಪಿ ಈ ಸಲ ಅಧಿಕಾರಕ್ಕೆ ಬಂದಿದೆ. 2008ರಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲು ಆಪರೇಷನ್ ಕಮಲವೇ ಕಾರಣವಾಗಿತ್ತು. ಆದರೆ, ಕಳೆದೊಂದು ದಶಕದಿಂದ ದೇಶದಲ್ಲಿ ಬಿಜೆಪಿ ವರ್ಚಸ್ಸು ಹೆಚ್ಚಿದೆ. ಹಲವು ರಾಜ್ಯಗಳಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಟ್ಟರೆ ಬೇರೆ ರಾಜ್ಯಗಳಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಬೆಳೆದಿಲ್ಲ.
ಹೀಗಾಗಿ, ಮುಂದಿನ ಚುನಾವಣೆಯಲ್ಲಿ ಸ್ವತಂತ್ರವಾಗಿ ಕರ್ನಾಟಕದಲ್ಲಿ ಅಧಿಕಾರಕ್ಕೆ ತರಲು ಬಿಜೆಪಿ ಮೆಗಾ ಪ್ಲ್ಯಾನ್ ನಡೆಸಿದೆ. ಅದಕ್ಕಾಗಿಯೇ ಅಮಿತ್ ಶಾ ರಾಜ್ಯದಲ್ಲಿ ಖಾಸಗಿ ಏಜೆನ್ಸಿಯಿಂದ ಸರ್ವೆ ಮಾಡಿಸಿದ್ದಾರೆ ಎನ್ನಲಾಗ್ತಿದೆ. ಸಮೀಕ್ಷಾ ವರದಿ ಅಮಿತ್ ಶಾ ಕೈ ಸೇರಿದ್ದು, ರಾಜ್ಯದ 30 ಕ್ಷೇತ್ರದ ಹಾಲಿ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಕೋಕ್ ನೀಡಬೇಕು ಹಾಗೂ ಹೊಸ ಮುಖಗಳಿಗೆ ಅವಕಾಶ ನೀಡಬೇಕು. ಅದರಿಂದ ಬಿಜೆಪಿ ಮತ್ತಷ್ಟು ಸಂಘಟನಾತ್ಮಕವಾಗಿ ಬೆಳೆಯಲು ಅನುಕೂಲವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜನರ ಸಮಸ್ಯೆಗೆ ಸ್ಪಂದಿಸದ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸದ, ಸಂಘಟನೆಯಲ್ಲಿ ತೊಡಗದ ರಾಜ್ಯದ 30 ಹಾಲಿ ಶಾಸಕರನ್ನು ಈ ತಂಡ ಪಟ್ಟಿ ಮಾಡಿದೆ. ಮುಂದಿನ ಚುನಾವಣೆಯಲ್ಲಿ ಇವರಿಗೆ ಟಿಕೆಟ್ ನೀಡಿದರೆ, ಅಲ್ಲಿ ಪಕ್ಷಕ್ಕೆ ಹಿನ್ನಡೆ ಆಗಲಿದೆ ಎಂದೂ ಈ ತಂಡ ವರದಿಯಲ್ಲಿ ಸಲಹೆ ನೀಡಿದೆ ಎಂದು ಮೂಲಗಳು ಖಚಿತಪಡಿಸಿವೆ. ಖಾಸಗಿ ಏಜೆನ್ಸಿ ನೀಡಿದ ವರದಿ ಅನುಷ್ಠಾನವಾದರೆ ರಾಜ್ಯದ 30 ಹಾಲಿ ಬಿಜೆಪಿ ಶಾಸಕರು ಮುಂದಿನ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಕಾರ್ಯಕರ್ತರಿಗೆ ಹೊಡೆಯುತ್ತಾ ಲಾಟರಿ?: ರಾಜ್ಯದ ಹಾಲಿ ಬಿಜೆಪಿ ಶಾಸಕರಿರುವ 30 ಕ್ಷೇತ್ರದ ಅಭ್ಯರ್ಥಿಗಳು ಬದಲಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರನ್ನು ಪರಿಗಣಿಸುತ್ತಾರೆ ಎಂದೇ ಹೇಳಲು ಆಗಲ್ಲ. ಹಾಗಂತಾ, ಬಿಡಬಹುದು ಅಂತೂ ಅಲ್ಲ. ಕೆಲ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಮಣೆ ಹಾಕಬಹುದು. ಇನ್ನೂ ಕೆಲ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆದು ಟಿಕೆಟ್ ನೀಡಬಹುದು. ಚುನಾವಣೆ ಸಮೀಪ ಬಂದಾಗ ಈ ಬಗ್ಗೆ ಬೆಳವಣಿಗೆ ತಾರಕಕ್ಕೇರುವ ಸಾಧ್ಯತೆ ಇದೆ.
ಇದನ್ನೂ ಓದಿ: ಕೆ.ಆರ್.ಪುರ: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಿಎಂ ಬೊಮ್ಮಾಯಿ ಭೇಟಿ
ಸಂಘಟನೆ ಹಾಗೂ ಸರ್ಕಾರ ಯೋಜನೆ ಜನರಿಗೆ ತಲುಪಿಸದ 30 ಕ್ಷೇತ್ರದ ಹಾಲಿ ಶಾಸಕರು ತಮ್ಮ ವರ್ತನೆ ಬದಲಿಸಿಕೊಳ್ಳಲು ಇನ್ನೂ ಒಂದು ವರ್ಷ ಸಮಯಾವಕಾಶ ಇದೆ. ಈಗಲೇ ಕ್ಷೇತ್ರಕ್ಕೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಬೇಕು. ಸಮಸ್ಯೆಗೆ ಸರ್ಕಾರ ಮಟ್ಟದಲ್ಲಿ ಪರಿಹಾರ ಕೊಡಿಸಬೇಕು. ಹಾಗಾದರೆ, ಮಾತ್ರ ಜನರ ಮನಸ್ಸಿನಲ್ಲಿ ಇಂಥ ಶಾಸಕರು ಉಳಿಯಲು ಸಾಧ್ಯ. ಬಿಜೆಪಿ ಟಿಕೆಟ್ ತಪ್ಪಿದರೂ ಬೇರೆ ಪಕ್ಷ, ಇಲ್ಲವೇ ಸ್ವತಂತ್ರವಾಗಿ ಸ್ಪರ್ಧಿಸಬಹುದು. ವರ್ಚಸ್ಸು ವೃದ್ಧಿಸಿಕೊಳ್ಳದಿದ್ದರೆ ಪಾರ್ಟಿನೂ ಜೊತೆಗಿರಲ್ಲ, ಜನರು ಜೊತೆಗಿರಲ್ಲ. ಮುಂದಿನ ದಿನಗಳಲ್ಲಿ ಶಾಸಕರು ಯಾವ ರೀತಿ ನಡೆದುಕೊಳ್ಳುತ್ತಾರೆ, ಅದರ ಮೇಲೆ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.