ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ, ಕಾಗವಾಡ, ಅಥಣಿ ಹಾಗೂ ರಾಯಬಾಗ ತಾಲೂಕಿನಲ್ಲಿ ಬೆಳೆದು ನಿಂತಿದ್ದ ಕಬ್ಬನ್ನು ಈ ಬಾರಿ ಕೃಷ್ಣಾ ನದಿ ಪ್ರವಾಹ ಮುಳುಗಿಸಿಬಿಟ್ಟಿದೆ. ಅಲ್ಲಿನ ಪರಿಸರದಲ್ಲಿ ಆಳೆತ್ತರಕ್ಕೆ ಬೆಳೆದಿದ್ದ ಕಬ್ಬು ಹಲವು ದಿನಗಳವರೆಗೆ ಮುಳುಗಡೆ ಆಗಿದ್ದರಿಂದಾಗಿ ಕೊಳೆತು ನಾರುತ್ತಿದೆ.
ಸಾವಿರಾರು ಎಕರೆ ಕಬ್ಬು ಪ್ರವಾಹದಿಂದ ಹಾಳಾಗಿದ್ದು, ಒಂದು ಎಕರೆಗೆ ಸರಾಸರಿ 40 ಟನ್ ಕಬ್ಬಿನ ಇಳುವರಿ ನಿರೀಕ್ಷಿಸಲಾಗಿತ್ತು. ಪ್ರವಾಹವು ಈ ಭಾಗದ ಸಾವಿರಾರು ರೈತರ ಕನಸುಗಳನ್ನು ನುಚ್ಚು ನೂರು ಮಾಡಿದ್ದು, ಅವರನ್ನು ಸಂಕಷ್ಟಕ್ಕೆ ದೂಡಿದೆ.
ಚಿಕ್ಕೋಡಿ ತಾಲೂಕಿನ ಮಾಂಜರಿ, ಅಂಕಲಿ, ಇಂಗಳಿ ಬಳಿ ನೂರಾರು ಎಕರೆ ಕಬ್ಬು ಕೊಳೆತು ದುರ್ವಾಸನೆ ಬೀರುತ್ತಿದೆ. ಕೆಲವೆಡೆ ಮಣ್ಣು ಲೇಪಿಸಿದಂತೆ, ಕೆಲವೆಡೆ ಒಣಗಿದಂತೆ ಕಾಣುವ ಬೆಳೆ ಮುಂದೆ ಬೆಳೆಯಲಾಗದ ಅಥವಾ ಕತ್ತರಿಸಿ ಕಾರ್ಖಾನೆಗಳಿಗೆ ಸಾಗಿಸಲಾಗದ ಸ್ಥಿತಿಯಲ್ಲಿದೆ.
ಈ ಒಣಗಿದ ಕಬ್ಬು ಯಾವುದಕ್ಕೂ ಪ್ರಯೋಜನಕ್ಕೆ ಬರೋದಿಲ್ಲ. ಈ ಒಣಗಿದ ಕಬ್ಬನ್ನು ಕಟಾವು ಮಾಡಿ ಮತ್ತೆ ಗದ್ದೆಯಿಂದ ಹೊರಗೆ ತೆಗೆದು ಮತ್ತೆ ನೆಲ ಹದ ಮಾಡಿ ಬಿತ್ತನೆಗೆ ಮುಂದಾಗ ಬೇಕಾದರೆ ರೈತರ ಹತ್ತಿರ ಹಣ ಕೂಡ ಇಲ್ಲ. ಬೆಳೆ ವಿಮೆ ಬರುವ ನೀರಿಕ್ಷೆಯಲ್ಲಿದ್ದಾರೆ ಸಂತ್ರಸ್ತ ರೈತರು. ಆದರೆ, ಪರಿಹಾರದ ಹಣ ಮಾತ್ರ ಅದ್ಯಾವಾಗ ಸಿಕ್ಕುತ್ತೋ ಏನೋ.. ಈಗ ಹೊಲಗಳಲ್ಲಿ ಹೊಸ ಕೆಲಸ ಮಾಡಬೇಕೆಂದರೆ ಕೈಯಲ್ಲಿ ದುಡ್ಡಿಲ್ಲ. ಇದರಿಂದ ಆತಂಕಕ್ಕೊಳಗಾದ ರೈತರಿಗೆ ಮುಂದೆ ಜಮೀನುಗಳಲ್ಲಿ ಏನು ಮಾಡಬೇಕು ಎನ್ನುವುದು ಪ್ರಶ್ನೆಯಾಗಿ ಉಳಿದಿದೆ.
ಇನ್ನು, ಕೆಲವು ಕಬ್ಬಿನ ಗದ್ದೆಗಳಲ್ಲಿ ಪ್ರವಾಹ ಇಳಿದರೂ ಸಹಿತ ನೀರು ಹಾಗೆ ಉಳಿದಿದೆ. ನೀರು ಒಂದೇ ಸ್ಥಳದಲ್ಲಿ ನಿಂತು ಹಸಿರು ಬಣ್ಣಕ್ಕೆ ತಿರಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಮೊದಲು ಗ್ರಾಮ ಪಂಚಾಯತ್‌ನವರು ಕೀಟ ನಾಶಕ ಸಿಂಪಡಿಸಬೇಕಿದೆ. ಆದರೆ, ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗರೂಕತೆ ಕೈಗೊಳ್ಳದೇ ಅದೇ ಹೆಸರಿನಲ್ಲಿ ಬಿಲ್ ತೆಗೆಯಲಾಗುತ್ತಿದೆ ಎಂಬ ಆರೋಪವನ್ನೂ ಸ್ಥಳೀಯ ನಿರಾಶ್ರಿತರು ಮಾಡುತ್ತಿದ್ದಾರೆ.