ಬೆಳಗಾವಿ :ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ನಡೆದ 2 ನೇ ವರ್ಷದ ಮಾವು ಮೇಳ ಯಶಸ್ವಿಯಾಗಿ ನಡೆಯಿತು. 10 ದಿನಗಳ ಕಾಲ ನಡೆದ ಈ ಮಾವು ಮೇಳದಲ್ಲಿ ಅನೇಕ ಬಗೆಯ ಮಾವಿನ ಹಣ್ಣು ಸವಿದು ಜನ ಸಂತೋಷಪಟ್ಟರು.
ಸುಮಾರು ಎರಡು ವರ್ಷಗಳಿಂದ ನಡೆಯುತ್ತಿರುವ ಮಾವು ಮೇಳದಲ್ಲಿ ಈ ವರ್ಷ ಮಾವು ಭರ್ಜರಿ ಮಾರಾಟವಾಗಿದ್ದು ರೈತರ ಮೊಗದಲ್ಲಿ ಸಂತೋಷ ತರಿಸಿದೆ. ಸುಮಾರು ಹತ್ತು ದಿನಗಳಲ್ಲಿ 2.5 ಕೋಟಿ ರೂ ಮೌಲ್ಯದ 200 ಟನ್ ಮಾವು ಮಾರಾಟವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ರವೀಂದ್ರ ಹಕಾಟೆ ತಿಳಿಸಿದ್ದಾರೆ.
ಕಡಿಮೆ ದರದಲ್ಲಿ ಮಾವು : ಪ್ರಖ್ಯಾತ ತಳಿಗಳ ಮಾವುಗಳು ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿದ್ದ ಪರಿಣಾಮ ಜನರು ಅತ್ಯಂತ ಉತ್ಸಾಹದಿಂದ ಈ ಮಾವು ಮೇಳದಲ್ಲಿ ಪಾಲ್ಗೊಂಡರು. ಮಾರುಕಟ್ಟೆ ಬೆಲೆಗಿಂತ ಸುಮಾರು 30 ಪ್ರತಿಶತ ಕಡಿಮೆ ಬೆಲೆ ಈ ಮಾವು ಮಾರಾಟವಾಗಿದ್ದು ಈ ಬಾರಿಯ ವಿಶೇಷ. ಒಟ್ಟಿನಲ್ಲಿ ಕುಂದಾನಗರಿ ಜನರ ಬಾಯಿ ಸಿಹಿ ಮಾಡಿರುವ ಈ ಮಾವು ಮೇಳ ಸಂಪೂರ್ಣ ಯಶಸ್ವಿಯಾಗಿದ್ದಂತೂ ಸತ್ಯ.