ಬೆಳಗಾವಿ: ಗ್ರಾಮೀಣ ಪ್ರದೇಶದಲ್ಲಿರುವ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ರಾಜ್ಯಮಟ್ಟದಲ್ಲಿ ಅತೀ ಶೀಘ್ರದಲ್ಲೇ ವಾರ್ ರೂಮ್ ಪ್ರಾರಂಭ ಮಾಡಲಾಗುವುದು ಎಂದು ಪಶುಸಂಗೋಪನೆ ಇಲಾಖೆ ಸಚಿವ ಪ್ರಭು ಚವ್ಹಾಣ ಹೇಳಿದರು.
ನಗರದ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಗ್ರಾಮೀಣ ಪ್ರದೇಶದ ಪಶುಗಳಲ್ಲಿ ಕಾಯಿಲೆ ಉಂಟಾದರೆ, ರೈತರು ವಾರ್ ರೂಮ್ ಗೆ ಕರೆ ಮಾಡಿ ಮಾಹಿತಿ ನೀಡಿದರೆ ಸಂಬಂಧಿಸಿದ ಪಶುವೈದ್ಯರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಚಿಕಿತ್ಸೆ ನೀಡಲಿದ್ದಾರೆ. ವಾರ್ ರೂಮ್ ವಿಚಾರದಲ್ಲಿ ಪಶುವೈದ್ಯರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಪಶು ಇಲಾಖೆಯಲ್ಲಿ ಶೀಘ್ರವಾಗಿ ಇಲಾಖೆಯಲ್ಲಿ 18000 ಹುದ್ದೆಗಳ ನೇಮಕಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ತಿಳಿಸಿದರು.
ಸಚಿವ ಸಂಪುಟದಿಂದ ತಮ್ಮನ್ನು ಮುಖ್ಯಮಂತ್ರಿಗಳು ಕೈ ಬಿಡಲಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ನನ್ನನ್ನು ಸಚಿವ ಸ್ಥಾನದಿಂದ ಕೈ ಬಿಡುತ್ತಾರೆ ಎಂದು ಯಾರು ಮುಖ್ಯಮಂತ್ರಿ ಹೇಳಿದ್ದಾರಾ..? ಅಥವಾ ನಮ್ಮ ಪಕ್ಷ ಹೇಳಿದೆಯಾ..? ಎಂದು ಮಾಧ್ಯಮಗಳಿಗೆ ಮರು ಪ್ರಶ್ನೆ ಹಾಕಿದರು. ವಂಡರ್‌ಫುಲ್ ಕೆಲಸ ಮಾಡುತ್ತಿದ್ದೀರಿ ಎಂದು ಮುಖ್ಯಮಂತ್ರಿಗಳೇ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕಳೆದ 30 ವರ್ಷಗಳಿಂದ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಸಚಿವ ಸ್ಥಾನದಿಂದ ನನ್ನ ಕೈ ಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.
ಬಸವಕಲ್ಯಾಣದಿಂದ ಬಿ.ವೈ. ವಿಜಯೇಂದ್ರ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಹೈಕಮಾಂಡ್, ಸಿಎಂ, ರಾಜ್ಯಾಧ್ಯಕ್ಷರು ಯಾರು ಸ್ಪರ್ಧೆ ಮಾಡಬೇಕು ಎಂಬುದನ್ನು ನಿರ್ಧಾರ ಮಾಡುತ್ತಾರೆ. ಯಾರೇ ಸ್ಪರ್ಧೆ ಮಾಡಿದರೂ ಕೂಡ ಬಸವಕಲ್ಯಾಣ ಕ್ಷೇತ್ರದಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ 20 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ. ಅದೇ ರೀತಿ ಮಸ್ಕಿ ಕ್ಷೇತ್ರದಲ್ಲಿಯೂ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.