ಅಥಣಿ(ಬೆಳಗಾವಿ): ಕೊರೊನಾ ಮಹಾಮಾರಿಯಿಂದ ಅಥಣಿ ಪಟ್ಟಣದ ಬೀದಿಬದಿ ವ್ಯಾಪಾರಸ್ಥರ ಕುಟುಂಬಗಳ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಿದೆ. ಸಣ್ಣ - ಪುಟ್ಟ ವ್ಯಾಪಾರಸ್ಥರಿಗೆ ಸರ್ಕಾರದಿಂದ ಆರ್ಥಿಕ ನೆರವಿಗೆ ಒತ್ತಾಯಿಸಿ ಅಥಣಿ ತಹಶೀಲ್ದಾರ್ ಕಚೇರಿ ಮುಂದೆ ಬೀದಿಬದಿ ವ್ಯಾಪಾರಸ್ಥರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಥಣಿ ಪಟ್ಟಣದಲ್ಲಿ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಪಟ್ಟಣದ ಪುರಸಭೆ ಅಧಿಕಾರಿಗಳು ಹಾಗೂ ಪೋಲಿಸ್ ಇಲಾಖೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರವನ್ನು ವ್ಯಾಪಾರಸ್ಥರು ಸಲ್ಲಿಸಿದರು.
ಇದೇ ವೇಳೆ, ಬೀದಿಬದಿ ವ್ಯಾಪಾರಸ್ಥ ರಫೀಕ್ ಸಾಬ್ ಮಾತನಾಡಿ, ಕೋವಿಡ್-19 ಸಲುವಾಗಿ ಲಾಕ್‌ಡೌನ್ ಹೇರಲಾಗಿತ್ತು. ದೇಶವು ಸಂಕಷ್ಟದ ಸಮಯದಲ್ಲಿರುವಾಗ ಸರ್ಕಾರದ ಆದೇಶಕ್ಕೆ ಸ್ಪಂದಿಸಿ ನಾವುಗಳು ನಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವ ಮೂಲಕ ಅಥಣಿ ತಾಲೂಕಿನ ಜನರ ಹಿತ ರಕ್ಷಣೆಗಾಗಿ ಸಹಕಾರ ನೀಡಿದ್ದೆವು. ಕಳೆದ 2-3 ತಿಂಗಳುಗಳಿಂದ ಉದ್ಯೋಗವಿಲ್ಲದೆ ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಮ್ಮ ಕುಟುಂಬ ವರ್ಗದ ಸ್ಥಿತಿಗತಿಗಳು ಕೂಡಾ ಬಿಗಡಾಯಿಸಿದೆ ಎಂದರು.
ಸದ್ಯ ಲಾಕ್‌ಡೌನ್ ತೆರೆದುಕೊಂಡಿದೆ, ಇನ್ನಾದರೂ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳೋಣ ಎಂದರೆ, ವ್ಯಾಪಾರ ವಹಿವಾಟು ನಡೆಸಲು ಪಟ್ಟಣದ ಪೊಲೀಸರು ಹಾಗೂ ಪುರಸಭೆ ಸಿಬ್ಬಂದಿಯಿಂದ ತೊಂದರೆ ಉಂಟಾಗುತ್ತಿದೆ. ಕಳೆದ 20-30 ವರ್ಷಗಳಿಂದ ವ್ಯಾಪಾರ ನಡೆಸುತ್ತಿರುವ ಸ್ಥಳದಲ್ಲೇ ನಮಗೆ ವಹಿವಾಟು ನಡೆಸಲು ಅನುಕೂಲ ಕಲ್ಪಿಸಿ ಕೊಟ್ಟು ಸಹಕರಿಸಬೇಕೆಂದು ವಿನಂತಿಸಿದರು.
ಅಥಣಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿದ್ದರು ಕೂಡಾ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿರುವುದಿಲ್ಲ. ಆದ್ದರಿಂದ ನಮ್ಮ ಕುಟುಂಬಗಳು ಆತ್ಮಹತ್ಯೆಯ ಹಾದಿ ತುಳಿಯುವ ಪರಿಸ್ಥಿತಿ ಉಂಟಾಗಿದೆ. ಸದ್ಯ ನಮ್ಮ ಹಾಗೂ ನಮ್ಮ ಕುಟುಂಬ ವರ್ಗದವರ ಜೀವನೋಪಾಯಕ್ಕಾಗಿ ಈ ಮೊದಲಿನ ಸ್ಥಳದಲ್ಲಿಯೇ ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಮಾಡಿ ಕೊಡಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.