ಚಿಕ್ಕೋಡಿ : ಸರ್ಕಾರದ ವಿವಿಧ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸುತ್ತಿದ್ದ ಬೀದಿ ನಾಟಕ ಕಲಾವಿದರ ಬದುಕು ಕೊರೊನಾದಿಂದ ಕೆಲಸವಿಲ್ಲದೆ ಬೀದಿಗೆ ಬಿದ್ದಿದೆ. ಜೀವನ ನಿರ್ವಹಣೆ ಮಾಡಲು ಪರದಾಡುತ್ತಿದ್ದಾರೆ.
ಇಲ್ಲಿನ ಬೀದಿ ನಾಟಕ ಕಲಾವಿದರು ಈವರೆಗೆ ಬಾಲ್ಯವಿವಾಹ ತಡೆ, ಬಾಲ ಕಾರ್ಮಿಕ ಪದ್ಧತಿ ನಿಷೇಧ, ದೇವದಾಸಿ ಪದ್ಧತಿ ನಿರ್ಮೂಲನೆ, ವರದಕ್ಷಿಣೆ ಪಿಡುಗು, ಮದ್ಯಪಾನ, ಮಾದಕ ವಸ್ತುಗಳ ನಿರ್ಮೂಲನೆ ಹಾಗೂ ಮೂಢನಂಬಿಕೆ ಸೇರಿದಂತೆ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಲಾ ಮಾಧ್ಯಮವನ್ನೇ ನೆಚ್ಚಿರುವ ಇವರು ಹಲವು ತಿಂಗಳಿಂದ ಕೆಲಸವಿಲ್ಲದೆ ಸಂಕಷ್ಟಕ್ಕೊಳಗಾಗಿದ್ದಾರೆ.
ಈ ಕಲಾವಿದರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಮೂಲಕ ನಗರ, ಗ್ರಾಮೀಣ ಪ್ರದೇಶದಲ್ಲಿ ಕಾರ್ಯಕ್ರಮಗಳನ್ನು ಸಂಯೋಜಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದರು.
ಈ ಮೂಲಕ ತಮ್ಮ ಜೀವನ ಸಾಗಿಸುತ್ತಿದ್ದರು. ಆದರೀಗ ಸರ್ಕಾರಿ ಇಲಾಖೆಗಳು ಜನರಿಗೆ ಮಾಹಿತಿ ನೀಡಲು ಎಲ್‌ಇಡಿ ವಾಹನ ಬಳಕೆ ಮಾಡುತ್ತಿರುವುದರಿಂದ ಬೀದಿನಾಟಕ ಮಾಡುವ ಕಲಾವಿದರಿಗೆ ಕೆಲಸವಿಲ್ಲದಂತಾಗಿದೆ.
ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಕಾರ್ಯಕ್ರಮ ರೂಪಿಸಿದೆ. ಬೇರೆ ರಾಜ್ಯದ ಕಂಪನಿಗಳಿಗೆ ಗುತ್ತಿಗೆ ನೀಡಿ, ಎಲ್‌ಇಡಿ ಪರದೆಯುಳ್ಳ ವಾಹನಗಳನ್ನು ಬಳಸಿಕೊಂಡು ಪ್ರಚಾರ ಮಾಡುತ್ತಿದೆ. ತಾಂತ್ರಿಕತೆಗೂ ಜೀವಂತ ಕಲೆಗೂ ತುಂಬಾ ವ್ಯತ್ಯಾಸವಿದೆ.
ಬೀದಿ ನಾಟಕ ಕಲೆಯನ್ನೇ ಅವಲಂಬಿಸಿರುವ ನಾವು ತೊಂದರೆಗೆ ಒಳಗಾಗಿದ್ದೇವೆ ಎಂದು ಮೂರು ದಶಕಗಳಿಂದ ಕಲಾ ತಂಡ ಕಟ್ಟಿಕೊಂಡು ಬೀದಿ ನಾಟಕ ಪ್ರದರ್ಶನ ನೀಡುತ್ತಿರುವ ಚಿಕ್ಕೋಡಿ ತಾಲೂಕಿನ ಧುಳಗನವಾಡಿಯ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಭರತ ಕಲಾಚಂದ್ರ ಅವರು ಈಟಿವಿ ಭಾರತದೊಂದಿಗೆ ಅಳಲು ತೋಡಿಕೊಂಡಿದ್ದಾರೆ.
ಯೋಜನೆಗಳಿಗೆ ಸಾವಿರಾರು ಕೋಟಿ ರೂ. ಖರ್ಚು ಮಾಡುವ ಸರ್ಕಾರ, ಬೀದಿನಾಟಕ ಕಲಾವಿದರನ್ನು ಬೀದಿಗೆ ತಳ್ಳುವುದು ಸರಿಯೇ? ಎಲ್‌ಇಡಿ ವಾಹನಗಳ ಬದಲಿಗೆ ಬೀದಿನಾಟಕ ಕಲಾವಿದರಿಗೆ ಅವಕಾಶ ಕೊಡಬೇಕು ಎಂದು ಭರತ ಕಲಾಚಂದ್ರ ಆಗ್ರಹಿಸಿದರು.