ಬೆಳಗಾವಿ: ಸುಮ್ಮನೆ ಕುಣಿಯೊಕೆ ಬಾರದೇ ಇರೋರು ನೆಲ ಡೊಂಕು ಅಂತಾ ಎನ್ನುತ್ತಿದ್ದಾರೆ. ಇನ್ನೊಬ್ಬರ ವಿರುದ್ಧ ಸುಮ್ಮನೆ ಆಪಾದನೆ ಮಾಡೋದು ಕಾಂಗ್ರೆಸ್ ಮುಖಂಡರ ಕೆಲಸ. ಪ್ರಧಾನಿ ಮೋದಿ ಮೇಲೆ ಆಪಾದನೆ ಮಾಡೋದು ಎಷ್ಟು ಸಮಂಜಸ ಅಂತಾ ಅವಲೋಕನ ಮಾಡಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕರ ಬಗ್ಗೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಅಕ್ಕಿ ಕೊಡುತ್ತಿಲ್ಲವೆಂದು ಮೋದಿ ಟಾರ್ಗೆಟ್ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅದನ್ನು ನಾವು ಖಂಡನೆ ಮಾಡುತ್ತೇವೆ. ಕಾಂಗ್ರೆಸ್ನವರು ಮೋದಿ ಮೇಲೆ ಸುಖಾಸುಮ್ಮನೆ ಆರೋಪ ಮಾಡಿದ್ದಾರೆ. ಮೋದಿ ಅವರು ಕೊಟ್ಟ ಅಕ್ಕಿಯೂ ಇದೆ. ತಾವೂ 10 ಕೆಜಿ ಅಕ್ಕಿ ಕೊಡ್ತೇನಿ ಅಂತಾ ಹೇಳಿದ್ದೀರಿ. ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಕೊಡ್ತೇದೆ ಅಂತಾ ಹೇಳಿದ್ರೆ ನಾವು ಒಪ್ಪಿಕೊಳ್ಳುತ್ತಿದ್ದೆವು. ನಾವು ಈವಾಗ ಡಿಮ್ಯಾಂಡ್ ಮಾಡೋದು ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ರಾಜ್ಯ ಸರ್ಕಾರದ 10 ಕೆಜಿ ಅಕ್ಕಿ ಸೇರಿ 15 ಕೆಜಿ ಅಕ್ಕಿ ಕೊಡಬೇಕು ಅಂತಾ. ಅವಾಗ್ಗೆ ಆ ಯೋಜನೆಯನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಆಗ್ರಹಿಸಿದರು.
ಗ್ಯಾರಂಟಿ ಯೋಜನೆ ಜಾರಿಗೆ ವಿಳಂಬ ವಿಚಾರಕ್ಕೆ ಪ್ರತಿಕ್ಷಿಯಿಸಿದ ಶಶಿಕಲಾ ಜೊಲ್ಲೆ ಅವರು, ರಾಜ್ಯದ ಹೆಣ್ಣು ಮಕ್ಕಳು ಗ್ಯಾರಂಟಿ ಯೋಜನೆ ನಂಬಿ ಕುಳಿತಿದ್ದಾರೆ. ಇವತ್ತಿನ ಪರಿಸ್ಥಿತಿಯಲ್ಲಿ ಅದು ಜಾರಿ ಆಗದೇ, ಸಮಸ್ಯೆ ನೋಡಿ ಜನರು ಪಶ್ಚಾತ್ತಾಪ ಪಡುತ್ತಿದ್ದಾರೆ. ಜನರಿಗೆ ಗ್ಯಾರಂಟಿ ಯೋಜನೆ ಸಿಗುತ್ತೆ ಇಲ್ಲೋ ಅನ್ನೋದು ನಾನು ಮಾತಾಡುವುದಕ್ಕಿಂತ ಸುಮ್ಮನೆ ಕುಳಿತು ನೋಡುವ ಕೆಲಸ ಮಾಡ್ತೇವಿ. ವೇಟ್ ಆ್ಯಂಡ್ ವಾಚ್ ಮಾಡಿ ಆ ಮೇಲೆ ಮಾತನಾಡುತ್ತೇವೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಅಕ್ಕಿ ವಿತರಣೆ ಒಂದೆರೆಡು ತಿಂಗಳು ತಡವಾದರೆ ತೊಂದರೆ ಇಲ್ಲ: ಮೈಸೂರಿನಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾಧ್ಯಮದವರೊಂದಿಗೆ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಜನರಿಗೆ ಅಕ್ಕಿ ವಿತರಣೆ ಮಾಡಲು ಸಿದ್ದರಾಮಯ್ಯನವರು ಈಗಾಗಲೇ ಕೇಂದ್ರದ ಜೊತೆಗೆ ಮಾತನಾಡಿದ್ದಾರೆ. ವಿತರಣೆಯಲ್ಲಿ ಒಂದೆರೆಡು ತಿಂಗಳು ತಡವಾದರೆ ಅಂತಹ ತೊಂದರೆ ಏನೂ ಆಗುವುದಿಲ್ಲ ಎಂದು ತಿಳಿಸಿದ್ದಾರೆ.
''ಉಚಿತ ಅಕ್ಕಿ ನೀಡುವುದನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ. ನಮಗೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡಲು ಪರ್ಯಾಯ ಮಾರ್ಗಗಳಿವೆ. ಆದರೂ ಮುಖ್ಯಮಂತ್ರಿಗಳು ಕೇಂದ್ರದ ಜೊತೆ ಮಾತನಾಡಿದ್ದಾರೆ. ಅಕ್ಕಿ ಬದಲಾಗಿ ಪರ್ಯಾಯವಾಗಿ ಬೇರೆ ಆಹಾರ ಧಾನ್ಯಗಳನ್ನು ನೀಡಲು ಮಾರ್ಗವಿದೆ. ಬೇರೆ ಬೇರೆ ಆಹಾರ ಪದಾರ್ಥಗಳನ್ನು ನೀಡಬಹುದು. 5 ಕೆಜಿ ಅಕ್ಕಿಯನ್ನು ಈಗಾಗಲೇ ನೀಡುತ್ತಿದ್ದೇವೆ. ಪೂರ್ಣ ಪ್ರಮಾಣದಲ್ಲಿ ಅಕ್ಕಿ ಕೊಡಲು ತಡವಾದರೆ ಅಂತಹ ತೊಂದರೆ ಏನೂ ಆಗದು'' ಎಂದು ಹೇಳಿದ್ದಾರೆ.
''ಈಗಾಗಲೇ ಉಚಿತ ವಿದ್ಯುತ್, ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಗೃಹ ಲಕ್ಷ್ಮಿ ಯೋಜನೆಗೆ ಆಗಸ್ಟ್ 15ರವರೆಗೆ ಸಮಯಾವಕಾಶವಿದೆ. ಈ ಮೂರು ಪ್ರಮುಖ ಯೋಜನೆಗಳು ಜಾರಿಯಾಗಿದ್ದು, ಯಾವುದೇ ತೊಂದರೆಗಳು ಇಲ್ಲ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದನ್ನೂಓದಿ:Rain: ಮುಂಬೈ, ಹರಿಯಾಣ, ದೆಹಲಿ, ಛತ್ತೀಸ್‌ಗಢ ಸೇರಿದಂತೆ ಉತ್ತರ ಭಾರತದ ಹಲವೆಡೆ ಭಾರಿ ವರ್ಷಧಾರೆ