ಬೆಳಗಾವಿ: ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಬಿಜೆಪಿ ರಾಜ್ಯ ಘಟಕದಲ್ಲಿ ರಾಜ್ಯ ಉಪಾಧ್ಯಕ್ಷರು ಸೇರಿ ವಿವಿಧ ಸ್ಥಾನಗಳಿಗೆ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದರಲ್ಲಿ ಮಾಜಿ ಶಾಸಕರಾದ ಅನಿಲ ಬೆನಕೆ ರಾಜ್ಯ ಉಪಾಧ್ಯಕ್ಷ ಹಾಗೂ ಪಿ. ರಾಜೀವ ಅವರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನ ಒಲಿದು ಬಂದಿದೆ. ಈ ಪಟ್ಟಿಯಲ್ಲಿ ಬಹುತೇಕ ಮಾಜಿ ಶಾಸಕರಿಗೆ ಮಣೆ ಹಾಕಲಾಗಿದೆ.
ಮಾಜಿ ಶಾಸಕ ಅನಿಲ ಬೆನಕೆ ಸದ್ಯ ಬೆಳಗಾವಿ ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿದ್ದರು. ಹಾಲಿ ಶಾಸಕರಿದ್ದರೂ ಟಿಕೆಟ್ ಕೈತಪ್ಪಿದ್ದರಿಂದ ಬೆನಕೆ ಪಕ್ಷದಿಂದ ಒಂದು ಹೆಜ್ಜೆ ಹೊರಗೆ ಇಟ್ಟಿದ್ದು, ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತು ಕೇಳಿ ಬಂದಿದ್ದವು. ಇದೀಗ ಬೆನಕೆ ಅವರನ್ನು ರಾಜ್ಯ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಮರಾಠಾ ಸಮುದಾಯದ ಮತಗಳು ಕೈ ಬಿಟ್ಟು ಹೋಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಅಲ್ಲದೆ, ಕುಡಚಿ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಪಿ.ರಾಜೀವ ಈ ಸಲದ ಚುನಾವಣೆಯಲ್ಲಿ ಸೋತಿದ್ದರು. ಪ್ರಖರ ವಾಗ್ಮಿಯೂ ಆಗಿರುವ ಪಿ.ರಾಜೀವ ಲೋಕಸಭೆ ಚುನಾವಣೆ ವೇಳೆ ರಾಜ್ಯಾದ್ಯಂತ ಉತ್ತಮ ಪ್ರಚಾರ ನಡೆಸಿ, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬಹುದು. ಮತ್ತು ಲಂಬಾಣಿ ಸಮುದಾಯಕ್ಕೆ ಸೇರಿದ್ದರಿಂದ ಆ ಸಮುದಾಯಕ್ಕೂ ಪ್ರಾತಿನಿಧ್ಯ ಕೊಟ್ಟಂತೆ ಆಗುತ್ತದೆ ಎಂಬ ಕಾರಣಕ್ಕಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಬೇಕೆಂಬ ಗುರಿ ಇಟ್ಟುಕೊಂಡು ಈಗಿನಿಂದಲೇ ತಯಾರಿ ನಡೆಸಿದ್ದು, ಅದರ ಭಾಗವಾಗಿ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ಇದು ಎಷ್ಟರಮಟ್ಟಿಗೆ ವರ್ಕೌಟ್ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಒಟ್ಟೂ 10 ಉಪಾಧ್ಯಕ್ಷರ ನೇಮಕ ಮಾಡಲಾಗಿದೆ. ಮಾಜಿ ಸಚಿವ ಮುರುಗೇಶ ನಿರಾಣಿ, ಬೈರತಿ ಬಸವರಾಜ್, ರಾಜುಗೌಡ ನಾಯಕ್, ಎನ್. ಮಹೇಶ್, ಅನಿಲ್ ಬೆನಕೆ, ಹರತಾಳು ಹಾಲಪ್ಪ, ರೂಪಾಲಿ ನಾಯಕ್, ಬಸವರಾಜ್ ಕೇಲಗಾರ, ಮಾಳವಿಕಾ ಅವಿನಾಶ್ ಹಾಗೂ ರಾಜೇಂದ್ರ ಅವರನ್ನು ಬಿಜೆಪಿ ಉಪಾಧ್ಯಕ್ಷರ ಸ್ಥಾನಕ್ಕೆ ನೇಮಕ ಮಾಡಲಾಗಿದೆ.
ಹಾಗೆಯೇ, ರಾಜ್ಯ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಸುನಿಲ್ ಕುಮಾರ್, ಪಿ. ರಾಜೀವ್, ನಂದೀಶ್ ರೆಡ್ಡಿ, ಪ್ರೀತಮ್ ಗೌಡರನ್ನು ನೇಮಕ ಮಾಡಲಾಗಿದೆ. ಕಾರ್ಯದರ್ಶಿಗಳನ್ನಾಗಿ ಶೈಲೇಂದ್ರ ಬೆಲ್ದಾಳೆ, ಡಿ.ಎಸ್. ಅರುಣ್, ಬಸವರಾಜ್ ಮತ್ತಿಮೋಡ್, ಸಿ. ಮುನಿರಾಜು, ವಿನಯ್ ಬಿದರೆ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಶರಣು ತಳ್ಳಕೇರಿ, ಲಲಿತಾ ಅನಾಪುರ, ಲಕ್ಷ್ಮೀ ಅಶ್ವಿನ್ ಗೌಡ, ಅಂಬಿಕಾ ಹುಲಿನಾಯ್ಕರ್ ನೇಮಕ ಮಾಡಲಾಗಿದೆ. ಆದರೆ ಖಜಾಂಚಿಯಾಗಿ ಸುಬ್ಬ ನರಸಿಂಹ ಅವರನ್ನೇ ಮುಂದುವರೆಸಲಾಗಿದೆ.
ಇದನ್ನೂ ಓದಿ: ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ; ತಕ್ಷಣದಿಂದಲೇ ಸಂಘಟನಾತ್ಮಕ ಜವಾಬ್ದಾರಿ ಆರಂಭಿಸುವಂತೆ ವಿಜಯೇಂದ್ರ ಕರೆ