ಚಿಕ್ಕೋಡಿ (ಬೆಳಗಾವಿ) : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧನೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಜಿಲ್ಲೆಯ ಅಥಣಿ ತಾಲೂಕಿನ ನದಿ-ಇಂಗಳಗಾಂವ ಗ್ರಾಮದ ಲಕ್ಷ್ಮಣ ಘೋರ್ಪಡೆ (24) ಮೃತ ಯೋಧ.
ಕಳೆದ ವಾರದ ಹಿಂದೆ ರಜೆಗೆಂದು ಸ್ವಗ್ರಾಮಕ್ಕೆ ಆಗಮಿಸಿದ ಇವರು ಸಂಬಂಧಿ ಸತೀಶ್ ಘೋರ್ಪಡೆ ಜತೆಗೂಡಿ ದ್ವಿಚಕ್ರ ವಾಹನದಲ್ಲಿ ಗೋವಾ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿಕೊಂಡು ವಾಪಸ್ ಊರಿಗೆ ಬರುವಾಗ ರಾಯಭಾಗ ತಾಲೂಕಿನ ಹಾರುಗೇರಿ ಸಮೀಪದಲ್ಲಿ ಗೋಕಾಕ್ ಅಥಣಿ ರಸ್ತೆಯಲ್ಲಿ ಬೈಕ್ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸ್ಥಳದಲ್ಲೇ ಯೋಧ ಲಕ್ಷ್ಮಣ ಘೋರ್ಪಡೆ ಮೃತಪಟ್ಟರೆ, ಹಿಂಬದಿ ಸವಾರ ಸತೀಶ್ ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಅವರು ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಅನಾರೋಗ್ಯದಿಂದ ಯೋಧ ನಿಧನ: ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಖೇಡಗಿ ಗ್ರಾಮದ ಯೋಧ ಲಖನೌದ ಕಮಾಂಡೋ ಮಿಲಿಟರಿ ಆಸ್ಪತ್ರೆಯಲ್ಲಿ ಮೃತರಾಗಿದ್ದರು. ಪ್ರಕಾಶ ಶಿರಶ್ಯಾಡ ಮೃತ ಯೋಧ. ಇವರು 2011ರಲ್ಲಿ ಸೈನ್ಯದಲ್ಲಿ ಭರ್ತಿಯಾಗಿ ಮದ್ರಾಸ್ ರೆಜಿಮೆಂಟ್ 7 ವೆಲಿಂಗ್ಟನ್ದಲ್ಲಿ ತರಬೇತಿ ಪಡೆದು ನಂತರ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಇನ್ನಿತರ ಕಡೆ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಮಧ್ಯಪ್ರದೇಶದ ಗ್ವಾಲಿಯರ್‌ದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೇ ಲೆಬನಾನ್ದಲ್ಲಿ ನಡೆದಿದ್ದ ಇಂಡೋ- ಲೆಬನಾನ್ ಜಂಟಿ ಸಮರಾಭ್ಯಾಸ ತರಬೇತಿಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ವಿಜಯಪುರ: ಅನಾರೋಗ್ಯದಿಂದ ಯೋಧ ನಿಧನ
ಬೆಳಗಾವಿಯ ಇಬ್ಬರು ಯೋಧರು ಸಾವು: ಪ್ರತ್ಯೇಕ ಘಟನೆಗಳಲ್ಲಿ ರಜೆಗೆಂದು ಊರಿಗೆ ಬಂದಿದ್ದ ಸೈನಿಕನೋರ್ವ ನಿಪ್ಪಾಣಿ ಬಳಿಯ ಸ್ತವನಿಧಿ ಘಾಟ್‌ನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟರೆ, ಇನ್ನೊಬ್ಬ ಯೋಧ ಹಾವೇರಿಯ ಬಸ್ ನಿಲ್ದಾಣದಲ್ಲಿ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡು ಸಾವನಪ್ಪಿದ ಘಟನೆ ಇತ್ತೀಚೆಗೆ ವರದಿಯಾಗಿತ್ತು.
ಪ್ರಕರಣ-1: ರಜೆಗೆಂದು ಊರಿಗೆ ಬಂದಿದ್ದ ನಿಪ್ಪಾಣಿ ತಾಲೂಕಿನ ನವಲಿಹಾಳ ಗ್ರಾಮದ ಯೋಗೇಶ ಅಪ್ಪಾಸಾಹೇಬ್ ದತ್ತವಾಡೆ (24) ಸ್ನೇಹಿತನನ್ನು ಭೇಟಿ ಮಾಡಿ ವಾಪಸ್ ಗ್ರಾಮಕ್ಕೆ ಮರಳುವಾಗ ನಿಪ್ಪಾಣಿ ಬಳಿಯ ಸ್ತವನಿಧಿ ಘಾಟ್‌ನಲ್ಲಿ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟಿದ್ದರು. ಇವರು ಮದ್ರಾಸ್ ರೆಜಿಮೆಂಟ್‌ನಲ್ಲಿ ಕಳೆದ ಐದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.
ಪ್ರಕರಣ-2: ರಜೆಗೆ ಬಂದಿದ್ದ ಇನ್ನೊಬ್ಬ ಯೋಧ ಹಾವೇರಿಯ ಬಸ್ ನಿಲ್ದಾಣದಲ್ಲಿ ಆಯ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡು ಸಾವಿಗೀಡಾಗಿದ್ದರು. ಅಥಣಿ ತಾಲೂಕಿನ ಕೋಕಟನೂರ ಗ್ರಾಮದ ಸಂಗಪ್ಪ ರಾಯಪ್ಪ ಸವದಿ (33) ಮೃತರೆಂದು ಗುರುತಿಸಲಾಗಿತ್ತು. ಹಾವೇರಿ ನಗರದ ಬಸ್ ನಿಲ್ದಾಣದಲ್ಲಿ ಬಿದ್ದು ತೀವ್ರ ಗಾಯಗೊಂಡಿದ್ದರಿಂದ ಇವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿದ್ದವು. ಕಳೆದ 13 ವರ್ಷದಿಂದ ಇವರು ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ಪ್ರತ್ಯೇಕ ಘಟನೆಗಳಲ್ಲಿ ಬೆಳಗಾವಿ ಜಿಲ್ಲೆಯ ಇಬ್ಬರು ಯೋಧರು ಸಾವು; ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ