ಬೆಳಗಾವಿ : ದೀಪಾವಳಿ ಅಮಾವಾಸ್ಯೆಯಂದೇ ಖಂಡಗ್ರಾಸ ಸೂರ್ಯಗ್ರಹಣ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಬಹುತೇಕ ದೇವಸ್ಥಾನಗಳಲ್ಲಿ ಗ್ರಹಣ ವೇಳೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು ಮಂದಿರಗಳಲ್ಲಿ ಎಂದಿನಂತೆ ಪೂಜಾ ಕೈಂಕರ್ಯ ನಡೆಯುತ್ತಿವೆ.
ಬೆಳಗಾವಿ ನಗರದಲ್ಲಿ ಗ್ರಹಣ ಆರಂಭ ಸಮಯ ಸಂಜೆ 5ಗಂಟೆ 11ನಿಮಿಷಕ್ಕೆ ಆರಂಭವಾಗಿ ಗ್ರಹಣದ ಮಧ್ಯಕಾಲ ಸಂಜೆ 5ಗಂಟೆ 50ನಿಮಿಷಕ್ಕೆ ಹಾಗೂ ಸಂಜೆ 6ಗಂಟೆ 28 ನಿಮಿಷಕ್ಕೆ ಸೂರ್ಯಗ್ರಹಣ ಮೋಕ್ಷ ಕಾಲ ನಡೆಯುತ್ತಿದೆ. ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಎಂದಿನಂತೆ ಪೂಜಾ ಕೈಂಕರ್ಯ ನಡೆಯುತ್ತಿದ್ದು, ಕಪಿಲೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಶಿವಲಿಂಗಕ್ಕೆ ರುದ್ರಾಭಿಷೇಕ್, ಸಂಜೆ 4ಗಂಟೆಯಿಂದ 6.30ರವರೆಗೆ ಮಹಾಮೃತ್ಯುಂಜಯ ಜಪ ಹಾಗೂ ಸೂರ್ಯಗ್ರಹಣ ವೇಳೆ ಕಪಿಲೇಶ್ವರ್ ಮಂದಿರದ ಶಿವಲಿಂಗವನ್ನು ಸಂಪೂರ್ಣವಾಗಿ ಬಿಲ್ವಪತ್ರೆಗಳಿಂದ ಅರ್ಚಕರು ಮುಚ್ಚಲಿದ್ದಾರೆ.
ಇದಲ್ಲದೇ ಗ್ರಹಣ ಸಮಯದಲ್ಲಿ ಭಕ್ತರಿಗೆ ದೇಗುಲ ಪ್ರವೇಶಕ್ಕೆ ಯಾವುದೇ ನಿರ್ಬಂಧ ಇಲ್ಲ. ದೇವಸ್ಥಾನಕ್ಕೆ ಭಕ್ತರು ಆಗಮಿಸಿ ದರ್ಶನ ಪಡೆದು, ಮಹಾಮೃತ್ಯುಂಜಯ ಜಪದಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಗ್ರಹಣ ಸಮಾಪ್ತಿ ಬಳಿಕ ದೇವಸ್ಥಾನ ಶುಚಿಗೊಳಿಸಿ ವಿಶೇಷ ಪೂಜೆ ನಡೆಸಲಾಗುತ್ತದೆ ಎಂದು ದೇವಸ್ಥಾನದ ಅರ್ಚಕರು ಮಾಹಿತಿ ನೀಡಿದ್ದಾರೆ.
ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲೂ ಭಕ್ತರಿಗೆ ಅವಕಾಶ: ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲೂ ಯಥಾಪ್ರಕಾರ ಪೂಜೆ ಕೈಂಕರ್ಯಗಳು ನಡೆಯುತ್ತಿವೆ. ಸವದತ್ತಿಯಲ್ಲಿ ಗ್ರಹಣ ಆರಂಭ ಸಮಯ ಸಂಜೆ 4ಗಂಟೆ 24ನಿಮಿಷಕ್ಕೆ, ಗ್ರಹಣ ಮಧ್ಯಕಾಲ ಸಂಜೆ 5.27ಕ್ಕೆ ಹಾಗೂ ಸಂಜೆ 6.25ಕ್ಕೆ ಗ್ರಹಣ ಅಂತ್ಯ ಕಾಲವಿದೆ.
ಗ್ರಹಣ ಸಮಯದಲ್ಲೂ ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ದರ್ಶನಕ್ಕೆ ಅವಕಾಶ ಒದಗಿಸಲಾಗಿದೆ. ನಿತ್ಯ ಸಂಜೆ 4.30ಕ್ಕೆ ನೆರವೇರಬೇಕಿದ್ದ ಪೂಜೆ ಗ್ರಹಣ ಸಮಾಪ್ತಿ ಬಳಿಕ ನೆರವೇರಿಸಲು ದೇವಸ್ಥಾನ ಆಡಳಿತ ಮಂಡಳಿಯವರು ನಿರ್ಧರಿಸಿದ್ದಾರೆ. ಸಂಜೆ 6.27ರ ಬಳಿಕ ಇಡೀ ದೇವಸ್ಥಾನ ಶುಚಿಗೊಳಿಸಿ ಯಲ್ಲಮ್ಮದೇವಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಮಹಾದೇವನ ದರ್ಶನಕ್ಕೆ ಅವಕಾಶ : ಚಿಕ್ಕೋಡಿಯಲ್ಲಿ ಗ್ರಹಣ ಆರಂಭ ಸಮಯ ಸಂಜೆ 4ಗಂಟೆ 49ನಿಮಿಷಕ್ಕೆ, ಸಂಜೆ 5.43ನಿಮಿಷಕ್ಕೆ ಗ್ರಹಣದ ಮಧ್ಯಕಾಲ ಹಾಗೂ ಸಂಜೆ 6.07ಕ್ಕೆ ಗ್ರಹಣ ಮೋಕ್ಷ ಕಾಲ ಆಭವಾಗುತ್ತದೆ. ಚಿಕ್ಕೋಡಿಯ ಮಹಾದೇವ ಮಂದಿರವೂ ಗ್ರಹಣ ವೇಳೆ ಓಪನ್ ಆಗಿದ್ದು ಗ್ರಹಣ ಸಮಾಪ್ತಿ ಬಳಿಕ ದೇವಸ್ಥಾನ ಶುಚಿಗೊಳಿಸಿ ವಿಶೇಷ ಪೂಜೆ ಮಾಡಲಾಗುತ್ತಿದೆ.
ಅಥಣಿ ತಾಲೂಕು ಕೊಕಟನೂರು ಯಲ್ಲಮ್ಮದೇವಿ ದೇವಸ್ಥಾನದಲ್ಲೂ ದರ್ಶನಕ್ಕೆ ಯಾವುದೇ ನಿರ್ಬಂಧವಿಲ್ಲ. ಗ್ರಹಣ ಸಮಾಪ್ತಿ ಬಳಿಕ ಕೃಷ್ಣಾ ನದಿ ನೀರು ತಂದು ದೇವಸ್ಥಾನ ಶುಚಿಗೊಳಿಸಿ ವಿಶೇಷ ಪೂಜೆ ಮಾಡಲಾಗುತ್ತಿದೆ. ಚಿಂಚಲಿ ಮಾಯಕ್ಕದೇವಿ ದೇಸ್ಥಾನದಲ್ಲೂ ಕೈಂಕರ್ಯ ಗ್ರಹಣ ವೇಳೆ ಯಾವುದೇ ಆಚರಣೆ ಇರಲ್ಲ. ಚಿಂಚಲಿ ಮಾಯಕ್ಕದೇವಿ ದೇವಸ್ಥಾನದಲ್ಲಿ ಎಂದಿನಂತೆ ಪೂಜಾ ಕೈಂಕರ್ಯ ನಡೆಯುತ್ತಿವೆ.
ಇದನ್ನೂ ಓದಿ : ಇಂದು ಸೂರ್ಯಗ್ರಹಣ: ಈ ಸಂದರ್ಭ ಏನು ಮಾಡಬೇಕು? ಏನು ಮಾಡಬಾರದು?