ಬೆಳಗಾವಿ : 75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ಅಂಗವಾಗಿ ನಡೆಯುತ್ತಿದ್ದ ಧ್ವಜಾರೋಹಣ ಸಂದರ್ಭದಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ರಾವ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ವಾತಂತ್ರ್ಯದ ಅಮೃತಮಹೋತ್ಸವ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಧ್ವಜಾರೋಹಣ ಕಾರ್ಯಕ್ರಮದ ಸಂದರ್ಭ ನವ್ಯಶ್ರೀ ಪ್ರತಿಭಟನೆಗೆ ಮುಂದಾಗಿದ್ದರು. ಹೀಗಾಗಿ ಅವರನ್ನು ಬೆಳಗಾವಿ ರಾಮದೇವ ಹೋಟೆಲ್ ಬಳಿಯೇ ಎಪಿಎಂಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನವ್ಯಶ್ರೀ ವಿರುದ್ಧದ ಅತ್ಯಾಚಾರ ಆರೋಪ ಎದುರಿಸುತ್ತಿರುವ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಅವರನ್ನು ಬಂಧಿಸುವಂತೆ ನವ್ಯಶ್ರೀ ಪಟ್ಟುಹಿಡಿದಿದ್ದಾರೆ. ಟಾಕಳೆ ಬಂಧನಕ್ಕೆ ಆಗ್ರಹಿಸಿ ಸಚಿವ ಗೋವಿಂದ ಕಾರಜೋಳ ಎದುರೇ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದ ಇವರನ್ನು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದು ಬೆಳಗಾವಿ ಮಹಿಳಾ ಠಾಣೆಗೆ ಕರೆದೊಯ್ದಿದ್ದಾರೆ.
ಇದನ್ನೂ ಓದಿ : ಕಡಬ: ಧ್ವಜಾರೋಹಣ ವೇಳೆ ಕುಸಿದು ಬಿದ್ದು ಮಾಜಿ ಸೈನಿಕ ಸಾವು