ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪೋಷಕರನ್ನು ಎಸ್ಐಟಿ ತಂಡ ಬೆಳಗಾವಿಗೆ ಕರೆ ತಂದು ಎಪಿಎಂಸಿ ಠಾಣೆಗೆ ಹಸ್ತಾಂತರಿಸಿ ವಾಪಸ್ ತೆರಳಿದೆ.
ಎಸ್ಐಟಿ ತಂಡದ ಎಸಿಪಿ ಪರಮೇಶ್ವರ್ ನೇತೃತ್ವದಲ್ಲಿ 16 ಎಸ್ಐಟಿ ಸಿಬ್ಬಂದಿಯ ಟೀಂ ಬೆಂಗಳೂರಿಂದ ನೇರವಾಗಿ ಬೆಳಗಾವಿ ನಗರದ ಬಾಕ್ಸೈಟ್ ರಸ್ತೆಯಲ್ಲಿರುವ ಎಪಿಎಂಸಿ ಪೊಲೀಸ್ ಠಾಣೆಗೆ ಆಗಮಿಸಿ, ಬಿಗಿ ಪೊಲೀಸ್ ಭದ್ರತೆಯಲ್ಲಿ ಸಂತ್ರಸ್ತ ಯುವತಿಯ ಕುಟುಂಬಸ್ಥರನ್ನು ಪೊಲೀಸರಿಗೆ ಹಸ್ತಾಂತರಿಸಿತು. ಈ ವೇಳೆ ಎಸಿಪಿ ಪರಮೇಶ್ವರ್, ಕುಟುಂಬದ ಸದಸ್ಯರನ್ನು ಕೆಲ ಹೊತ್ತು ವಿಚಾರಣೆ ಮಾಡಿ ಬೆಂಗಳೂರಿಗೆ ತೆರಳಿದರು.
1 ಗಂಟೆಗೂ ಅಧಿಕ ವಿಚಾರಣೆ:
ಬಳಿಕ ಎಪಿಎಂಸಿ ಠಾಣೆ ಸಿಪಿಐ ದಿಲೀಪ್‌ಕುಮಾರ್ ಅವರು ಒಂದು ಗಂಟೆಗೂ ಹೆಚ್ಚು ಕಾಲ ಕುಟುಂಬಸ್ಥರ ವಿಚಾರಣೆ ನಡೆಸಿದರು. ಈ ವೇಳೆ ಎಲ್ಲಿ ವಾಸವಾಗಿದ್ದೀರಾ, ಏನು ಕೆಲಸ ಮಾಡುತ್ತಿದ್ದಾರಾ, ಭದ್ರತೆ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಂಡರು. ಬಳಿಕ ಬೆಳಗಾವಿ ನಗರದ ಮನೆಯೊಂದಕ್ಕೆ ಪೋಷಕರನ್ನು ಎಪಿಎಂಸಿ ಪೊಲೀಸರು ಶಿಫ್ಟ್ ಮಾಡಿದ್ದು, ಮನೆ ಬಳಿ ಓರ್ವ ಎಎಸ್‌ಐ, ಮೂವರು ಪೊಲೀಸ್ ಪೇದೆಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.
ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಯುವತಿ ತಂದೆ:
ಪೊಲೀಸ್ ಠಾಣೆಯಿಂದ ಮನೆಗೆ ತೆರಳುವ ವೇಳೆ ಹೊರ ಬಂದ ಸಂತ್ರಸ್ತ ಯುವತಿ ತಂದೆ ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದ್ದು, ದಯಮಾಡಿ ಇವಾಗ ನನ್ನನ್ನು ಏನೂ ಕೇಳಬೇಡಿ, ನಿಮ್ಮ ಹತ್ತಿರ ಮತ್ತೆ ಬರುತ್ತೇನೆ. ಈಗಾಗಲೇ ನಾನು ಏನು ಹೇಳಬೇಕು ಅದನ್ನೆಲ್ಲವನ್ನೂ ಮಾಧ್ಯಮದ ಮುಂದೆ ಹೇಳಿದ್ದೇನೆ ಎಂದರು.
ಓದಿ: ಸಿಡಿ ಹಿಂದೆ ಕೆಲ ಬಿಜೆಪಿ ನಾಯಕರ ಷಡ್ಯಂತ್ರ ಇದೆಯೇ? ಈ ಪ್ರಶ್ನೆಗೆ ಜಾರಕಿಹೊಳಿ ಉತ್ತರ ಹೀಗಿದೆ!
ಇಲ್ಲೆ ಇರ್ತಿನಿ, ಬಿಟ್ಟು ಬಿಡಿ:
ಯುವತಿಯ ಮತ್ತೊಂದು ವಿಡಿಯೋ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಆ ವಿಡಿಯೋ ನೋಡಿದ್ದೇನೆ. ನಾಳೆ ಅಥವಾ ನಾಡಿದ್ದು ನಾನು ನಿಮ್ಮ ಜೊತೆ ಮಾತನಾಡುತ್ತೇನೆ. ನಾನು ಇಲ್ಲೇ ಬೆಳಗಾವಿಯಲ್ಲಿ ಇರುತ್ತೀನಿ. ಎಲ್ಲವನ್ನೂ ಮಾತನಾಡ್ತೀನಿ. ನಮಗೂ ಸ್ವಲ್ಪ ನೆಮ್ಮದಿಯಿಂದ ಇರಲು ಬಿಡಿ ಎಂದು ತಮ್ಮ ಅಳಲು ತೋಡಿಕೊಂಡರು.