ಬೆಳಗಾವಿ: ನಾನು ಎಲ್ಲಿ ನಿಂತುಕೊಳ್ಳಬೇಕು ಅಂತಾ ಪಕ್ಷ ತೀರ್ಮಾನ ಮಾಡುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮುಂಬರುವ ಚುನಾವಣೆ ಸ್ಪರ್ಧೆಗೆ ಕ್ಷೇತ್ರದ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಯಾವುದೇ ಕ್ಷೇತ್ರ ಇಲ್ಲದೇ ಹೋದರೆ ಬಹಳ ಜನ ಕರೀತಾರಾ?, ಬಿಜೆಪಿಯವರಿಗೆ ಬುದ್ಧಿ ಇಲ್ಲವೆಂದು ತಿರುಗೇಟು ನೀಡಿದರು.
ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆಗೆ ಹೆಚ್ಚಿನ ಒತ್ತಡ ಇದೆ. ಸಾವಿರಾರು ಜನ ಹೆಣ್ಣು ಮಕ್ಕಳು ಮನೆ ಎದುರು ಧರಣಿ ಮಾಡುತ್ತೇವೆ ಎಂದು ಒತ್ತಡ ಹಾಕಿದ್ದಲ್ಲದೆ ಪತ್ರ ಬರೆದಿದ್ದಾರೆ. ನಾನು ಏಕೆ ಯೋಚನೆ ಮಾಡುತ್ತಿದ್ದೇನೆ ಎಂದರೆ ವಾರಕ್ಕೊಮ್ಮೆ ಅಲ್ಲಿ ಇರಕ್ಕಾಗಲ್ಲ. ಕಾರ್ಯಕರ್ತರಿಗೆ, ಜನರಿಗೆ ಸಿಗಕ್ಕಾಗಲ್ಲ. ಅವರ ಕಷ್ಟ ಸುಖಕ್ಕೆ ಸ್ಪಂದಿಸಲಾಗಲ್ಲ. ನೀವು ಬಂದು ನಿಂತುಕೊಳ್ಳಿ ಅಂತಾ ಅವರು ಹೇಳಬಹುದು. ಆದ್ರೆ, ನನಗೆ ಮನಸು ಒಪ್ಪುತ್ತಿಲ್ಲ. ಎರಡು ತಿಂಗಳಾಯ್ತು ಬಾದಾಮಿಗೆ ಹೋಗಿಲ್ಲ. ನಾಳೆ ಹೋಗಬೇಕು ಎಂದುಕೊಂಡಿದ್ದೆ. ಆದರೆ ನಾಳೆಯೂ ಕ್ಯಾನ್ಸಲ್ ಆಗಿದೆ ಎಂದರು.
ವರುಣಾದಿಂದ ಸ್ಪರ್ಧೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಸಲಹೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವೈಯಕ್ತಿಕವಾಗಿ ಸಿ ಎಂ ಇಬ್ರಾಹಿಂ ಒಳ್ಳೆಯ ಗೆಳೆಯ. ಆದ್ರೆ, ನಮ್ಮನ್ನು ಬಿಟ್ಟು ಜೆಡಿಎಸ್ ಹೋಗಿ ಅಧ್ಯಕ್ಷರಾಗಿದ್ದಾರೆ. ಅವರು ಭದ್ರಾವತಿಗೆ ಜೆಡಿಎಸ್‌ನಿಂದ ನಿಂತುಕೊಳ್ಳೋದು ಒಳ್ಳೆಯದು. ಅಲ್ಲಿ ಯಾರೂ ಇಲ್ಲ ಈಗ. ಪಾಪ ಮಾಜಿ ಶಾಸಕ ಅಪ್ಪಾಜಿ ಗೌಡ ಸತ್ತೋಗಿದ್ದಾರೆ. ನಾನು ಎಲ್ಲಿ ನಿಂತುಕೊಳ್ಳಬೇಕು ಅಂತಾ ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಆತ್ಮೀಯವಾಗಿ ಹೇಳೋದಾದರೆ ವೈಯಕ್ತಿಕವಾಗಿ ನನಗೆ ಬಂದು ಹೇಳಲಿ. ಭದ್ರಾವತಿಗೆ ಸಿಟ್ಟಿಂಗ್ ಎಂಎಲ್‌ಎ ಟಿಕೆಟ್ ತಪ್ಪಿಸಿ ಅವರಿಗೆ ಅವಕಾಶ ಕೊಟ್ಟಿದ್ದಿವಿ. ಆದರೆ, ಇಬ್ರಾಹಿಂ ಡಿಪಾಜಿಟ್ ಹೋಯ್ತು. ಅವರ ಲೆಕ್ಕಾಚಾರ ತಪ್ಪಾಯ್ತಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಒಬ್ಬಂಟಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸುತ್ತ, ನಾನು ಒಬ್ಬಂಟಿಗನಾಗಿದ್ದರೆ ಇವರೆಲ್ಲ ಯಾರು?, ಪಕ್ಕದಲ್ಲಿ ನಿಂತಿದ್ದ ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಂಜಲಿ ನಿಂಬಾಳ್ಕರ್, ಫಿರೋಜ್ ಸೇಠ್, ಎಂ.ಬಿ.ಪಾಟೀಲ್ ಅವರನ್ನು ತೋರಿಸಿದ ಸಿದ್ದರಾಮಯ್ಯ ಎಲ್ಲ ಧರ್ಮದವರು, ಜಾತಿಯವರು ನನ್ನ ಜೊತೆ ಇದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಜನಾರ್ದನ ರೆಡ್ಡಿ ಕಾಂಗ್ರೆಸ್‌ಗೆ ಬರ್ತಾರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ನನ್ನ ಜೊತೆ ಅವರು ಏನೂ ಮಾತಾಡಿಲ್ಲ ಎಂದರು. ಇನ್ನು ಮುರುಘಾ ಶ್ರೀಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ವಿಚಾರ ಕೋರ್ಟ್‌ನಲ್ಲಿದೆ. ಅದರ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಿದ್ದರಾಮಯ್ಯ ಡಿಕೆಶಿ ಸಂಬಂಧ ಸರಿ ಇಲ್ಲ ಎಂಬ ಬಿಜೆಪಿ ಆರೋಪ ಮಾತನಾಡಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಸಂಬಂಧ ಚೆನ್ನಾಗಿದೆಯಾ ಅಂತಾ ಗೊತ್ತಾ. ಬೊಮ್ಮಾಯಿ ಯಡಿಯೂರಪ್ಪ ಅವರ ಇಬ್ಬರ ಸಂಬಂಧ ಹಳಸಿಹೋಗಿದೆ. ನಾವಿಬ್ಬರೂ ಚೆನ್ನಾಗಿದ್ದೇವೆ ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ: ಬಿಜೆಪಿಯವರು __ಇಲ್ಲದವರು, ನಮ್ಮ ಮಕ್ಕಳನ್ನು ತೆಗೆದುಕೊಂಡು ಹೋಗ್ತಿದ್ದಾರೆ: ಸಿಎಂ ಇಬ್ರಾಹಿಂ ವ್ಯಂಗ್ಯ