ಬೆಳಗಾವಿ: ಅಬ್ಬರದ ಬ್ಯಾಟಿಂಗ್ ಮೂಲಕ ಬೃಹತ್ ರನ್ ಕಲೆ ಹಾಕಿದ್ದ ಭಾರತ ಎ ತಂಡದ ಆಟಗಾರರು ಬೌಲಿಂಗ್ ವಿಭಾಗದಲ್ಲೂ ಅಬ್ಬರಿಸಿದ್ದಾರೆ.
ಇಲ್ಲಿನ ಆಟೋನಗರದ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ಮೂರು ದಿನಗಳ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ಭಾರತೀಯರ ಮಾರಕ ಬೌಲಿಂಗ್ ದಾಳಿಗೆ ಲಂಕಾ ಬ್ಯಾಟ್ಸ್‌ಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದ್ದಾರೆ.
ಎರಡನೇ ದಿನದಾಟದ ಅಂತ್ಯದಲ್ಲಿ 4 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದ್ದ ಲಂಕಾ ಬ್ಯಾಟ್ಸ್ಮನ್ಗಳು ಇಂದು ಭೋಜನ ವಿರಾಮಕ್ಕೆ ಮುನ್ನ 231 ರನ್ಗಳಿಗೆ ಸರ್ವಪತನ ಕಂಡಿತು. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 391 ರನ್ ಮುನ್ನಡೆ ಸಾಧಿಸಿದೆ.
ಶ್ರೀಲಂಕಾ ಪರ ನಿಶ್ಚಲ್ ಡಿಕ್ವೆಲ್ಲಾ ಶತಕ 103 ಹಾಗೂ ಆಶನ್ ಪ್ರಿಯಾಂಜನ್ 49 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ನಿರೀಕ್ಷಿತ ಪ್ರದರ್ಶನ ತೋರಲಿಲ್ಲ.
ಭಾರತ ಎ ತಂಡದ ಪರ ಸಂದೀಪ್ ವಾರಿಯರ್ 2 , ಶಿವಂ ದುಬೆ 2, ಆರ್.ಡಿ. ಚಾಹರ್ 4, ಹಾಗೂ ಜೆ.ಜೆ.ಯಾದವ್ 2 ವಿಕೆಟ್ ಗಳಿಸಿದ್ದಾರೆ.
ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಲಂಕಾ ತಂಡ ಪ್ರಮುಖ 12 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿದೆ. ಭಾರತದ ಪರ ಅಂಕಿತ್ ರಜಪೂತ್ 2 ಹಾಗೂ ಸಂದೀಪ್ ವಾರಿಯರ್ 1 ವಿಕೆಟ್ ಕಬಳಿಸಿದ್ದು, ದ್ವಿತೀಯ ಇನ್ನಿಂಗ್ಸ್ನಲ್ಲೂ ಲಂಕಾ ಬ್ಯಾಟ್ಸ್‌ಮನ್ಗಳಿಗೆ ಪೆವಿಲಿಯನ್ ದಾರಿ ತೋರಿದ್ದಾರೆ.