ಬೆಳಗಾವಿ : ಧಾರವಾಡದ ಜಿಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಹಿಂಡಲಗಾ ಜೈಲು ಪಾಲಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಪತ್ನಿ ಶಿವಲೀಲಾ ಹಾಗೂ ಅವರ ಸಹೋದರ ವಿಜಯ ಕುಲಕರ್ಣಿ ಭೇಟಿಯಾದರು.
ನಗರದ ಹಿಂಡಲಗಾ ಜೈಲಿಗೆ ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನು 31ದಿನದ ಬಳಿಕ 2ನೇ ಬಾರಿಗೆ ಪತ್ನಿ ಶಿವಲೀಲಾ ಭೇಟಿಯಾದ್ರೆ, ಮೊದಲ ಬಾರಿಗೆ ಸಹೋದರ ವಿಜಯ ಕುಲಕರ್ಣಿ ಭೇಟಿಯಾದರು. ಸುಮಾರು 31 ದಿನಗಳ ಬಳಿಕ ಕುಟುಂಬಸ್ಥರನ್ನು ಕಂಡು ವಿನಯ್ ಭಾವುಕರಾದರು. ಈ ವೇಳೆ ಕುಟುಂಬಸ್ಥರು ತಾವು ತಂದಿದ್ದ ಆಹಾರವನ್ನು ನೀಡಿ ಯೋಗಕ್ಷೇಮ ವಿಚಾರಿಸಿದರು.
ಧಾರವಾಡ ಹೆಬ್ಬಳ್ಳಿ ಜಿಪಂ ಸದಸ್ಯ ಪ್ರಕರಣದಲ್ಲಿ ಜೈಲುಪಾಲಾಗಿರುವ ವಿನಯ ಕುಲಕರ್ಣಿಗೆ ಕಳೆದ ಡಿ.10ರಂದು ಕುಟುಂಬಸ್ಥರಿಗೆ ಭೇಟಿಯಾಗಲು ಕೋರ್ಟ್ ಅನುಮತಿ ನೀಡಿತ್ತು. ಅನುಮತಿ ಮೇರೆಗೆ ಕುಟುಂಬಸ್ಥರು ಒಂದು ತಿಂಗಳ ಬಳಿಕ ಭೇಟಿಯಾಗಿದ್ದಾರೆ. ಆದ್ರೆ, ಕೋರ್ಟ್ ಅನುಮತಿಯಲ್ಲಿ ಕೇವಲ ಇಬ್ಬರಿಗೆ ಮಾತ್ರ ಜೈಲಿನೊಳಗಡೆ ಪ್ರವೇಶ ನೀಡಲಾಗಿತ್ತು.
ಧಾರವಾಡದಿಂದ ಬರುವಾಗ ಕುಲಕರ್ಣಿ ಪುತ್ರಿಯರಾದ ವೈಶಾಲಿ, ದೀಪಾಲಿ ಹಾಗೂ ಪುತ್ರ ಹೇಮಂತ ಕೂಡ ಆಗಮಿಸಿದ್ದರು. ಆದ್ರೆ, ಕೋರ್ಟ್ ಕೇವಲ ಇಬ್ಬರಿಗೆ ಮಾತ್ರ ಅನುಮತಿ ನೀಡಿದ್ದರಿಂದ ಪುತ್ರ, ಪುತ್ರಿಯರಿಬ್ಬರು ಜೈಲು ಆವರಣದಲ್ಲಿ ಕಾಯ್ದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ತಂದೆಯನ್ನು ಭೇಟಿಯಾಗದ ಹಿನ್ನೆಲೆ ಅವರಿಬ್ಬರು ನಿರಾಸೆಗೊಂಡು ತೆರಳಿದರು.
ಓದಿ: ಬ್ರಿಟನ್ನಿಂದ ಆಗಮಿಸಿದ 226 ಪ್ರಯಾಣಿಕರಲ್ಲಿ ಐವರಿಗೆ ಕೊರೊನಾ ಪಾಸಿಟಿವ್
ಕೋರ್ಟ್ ಕುಲಕರ್ಣಿಯವರ ಭೇಟಿಗೆ ಇಂದು ಸಂಜೆ 4ರಿಂದ 5 ಗಂಟೆ ಅವಧಿಯಲ್ಲಿ ಅವಕಾಶ ನೀಡಿತ್ತು. ಹೀಗಾಗಿ, ಕುಟುಂಬ ಸಮೇತರಾಗಿ ಧಾರವಾಡದಿಂದ ಸಂಜೆ ನಾಲ್ಕು ಗಂಟೆಗೆ ಆಗಮಿಸಿ, ಜೈಲಿನೊಳಗೆ ತೆರಳಿ ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು. ಒಂದು ಗಂಟೆ ಸಮಯಾವಕಾಶ ಮುಗಿದ ಬಳಿಕ ಕುಟುಂಬಸ್ಥರು ಹೊರ ಬಂದರು.