ಬೆಳಗಾವಿ : ಛತ್ರಪತಿ ಶಿವಾಜಿ ಮಹಾರಾಜರು ಭಾರತದ ಆಸ್ತಿ. ಅವರು ದೇಶದಲ್ಲಿ ಹಿಂದುತ್ವದ ಸಿದ್ಧಾಂತದಡಿ ರಾಜ್ಯಭಾರ ಮಾಡಿದ್ದಾರೆ. ಅವರು ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ತಾಲೂಕು ಸಾವಗಾಂವ್ ಗ್ರಾಮದಲ್ಲಿ ಶಿವಸ್ಮಾರಕ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಲಾಗುತ್ತಿರುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯ ಭವ್ಯ ಮೆರವಣಿಗೆಗೆ ನಗರದ ನಾನಾವಾಡಿ ಗಣೇಶ ಮಂದಿರದ ಬಳಿ ಚಾಲನೆ ನೀಡಿ ಮಾತನಾಡಿದರು.
ಶಿವಾಜಿ ಮಹಾರಾಜರು ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕ. ಅವರಂತೆಯೇ ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಿ.ಆರ್.ಅಂಬೇಡ್ಕರ್ ಅವರಂತಹ ಮಹಾನ್ ವ್ಯಕ್ತಿಗಳು ರಾಷ್ಟ್ರಪ್ರೇಮ, ಜನಪರ ಕಾಳಜಿಯ ಪ್ರತೀಕಗಳಾಗಿದ್ದಾರೆ.
ಅಂತಹ ಮಹಾಪುರುಷರನ್ನು ನೆನೆಯಬೇಕಿರುವುದು ನಮ್ಮೆಲ್ಲರ ಕರ್ತವ್ಯ. ಮಹಾಪುರುಷರ ಆದರ್ಶಗಳನ್ನು ದೇಶದ ಯುವ ಪೀಳಿಗೆ ಮೈಗೂಡಿಸಿಕೊಂಡು ಹೋಗಬೇಕಿದೆ ಎಂದರು.
ಓದಿ: ದಾಬಸ್ ಪೇಟೆಯತ್ತ ಪಂಚಮಸಾಲಿ ಮೀಸಲಾತಿ ಹೋರಾಟದ ಪಾದಯಾತ್ರೆ
ಮಾಜಿ ಶಾಸಕ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಶಿವಾಜಿ ಮಹಾರಾಜರು ದೇಶಕ್ಕೆ ಸಲ್ಲಿಸಿದ ಸೇವೆ, ಹಿಂದುತ್ವ ಜಾಗೃತಿಗೆ ಮಾಡಿದ ಕಾರ್ಯ ಮರೆಯಲಾಗದು ಎಂದ ಅವರು, ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.