ಬೆಳಗಾವಿ: ಕರ್ನಾಟಕ ಪೊಲೀಸರಿಗೆ ಸವಾಲು ಹಾಕಿ ಶಿವಸೇನೆ ಪಕ್ಷದ ಮುಖಂಡ ಸಂಜಯ್ ರಾವತ್ ಇಂದು ಬೆಳಗಾವಿಗೆ ಆಗಮಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ತೊಂದರೆ ಆಗುವ ಸಾಧ್ಯತೆಯಿರುವುದರಿಂದ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕರ್ನಾಟಕ - ಮಹಾರಾಷ್ಟ್ರ ಗಡಿಯ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೋಗನೊಳಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 48 ರಲ್ಲಿರುವ ಟೋಲ್ ಬಳಿ ಪೋಲಿಸರ ಹದ್ದಿನ ಕಣ್ಣಿಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ 100 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮಹಾರಾಷ್ಟ್ರದಿಂದ ಬರುವ ಪ್ರತಿಯೊಂದು ವಾಹನವನ್ನು ಕರ್ನಾಟಕ ರಾಜ್ಯ ಪೊಲೀಸರು ತಪಾಸಣೆ ನಡೆಸಿದರು.
ಬೆಳಗಾವಿಯ ಅತ್ಯಂತ ಹಳೆಯ ಸಾರ್ವಜನಿಕ ಗ್ರಂಥಾಲಯದ ಬ್ಯಾ.ನಾಥ್ ಪೈ ವ್ಯಾಖ್ಯಾನಮಾಲೆ ಕಾರ್ಯಕ್ರಮ ಸಂಜೆ 4:30 ಕ್ಕೆ ನಡೆಯಲಿದೆ. ನಗರದ ಗೋಗಟೆ ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾವತ್ ಆಗಮಿಸಿದ್ದಾರೆ. ಕಾರ್ಯಕ್ರಮಕ್ಕೆ ಮಾತ್ರ ಅನುಮತಿ ನೀಡಿರುವ ಬೆಳಗಾವಿ ಪೊಲೀಸರು ಸಂಜಯ್ ರಾವತ್‌ಗೆ ನಗರ ಪ್ರವೇಶಕ್ಕೆ ಇನ್ನೂ ಅನುಮತಿ ನೀಡಿಲ್ಲ.
ಮುಂಜಾಗ್ರತಾ ಕ್ರಮವಾಗಿ ಚೆನ್ನಮ್ಮ ವೃತ್ತ ಸೇರಿದಂತೆ ಬೆಳಗಾವಿ ನಗರದಾದ್ಯಂತ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ವಿವಾದಾತ್ಮಕ ಹೇಳಿಕೆಗಳಿಂದಲೇ ಸಂಜಯ್ ರಾವತ್ ಸದಾ ಸುದ್ದಿಯಲ್ಲಿದ್ದಾರೆ. ಬೆಳಗಾವಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ತೊಂದರೆ ಆಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಸಂಜಯ್ ರಾವತ್‌ಗೆ ನಗರ ಪ್ರವೇಶಕ್ಕೆ ಅನುಮತಿ ನೀಡದಂತೆ ಕನ್ನಡಪರ ಸಂಘಟನೆ ಕಾರ್ಯಕರ್ತರು ಪಟ್ಟು ಹಿಡಿದ್ದಾರೆ. ಅಲ್ಲದೇ ಅನುಮತಿ ನೀಡಿದ್ರೇ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.