ಬೆಳಗಾವಿ: ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ವಿಧೇಯಕ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕೃತಗೊಂಡಿತು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿಯ ಮೀಸಲು ಪ್ರಮಾಣವನ್ನು ಶೇ.15 ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲು ಪ್ರಮಾಣವನ್ನು ಶೇ.3 ರಿಂದ 7ಕ್ಕೆ ಹೆಚ್ಚಿಸುವ ಮೀಸಲಾತಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು.
ವಿಧಾನಸಭೆಯಲ್ಲಿ ಇಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಮಂಡಿಸಿದ ವಿಧೇಯಕಕ್ಕೆ ಆಡಳಿತ ಹಾಗೂ ಪ್ರತಿಪಕ್ಷಗಳ ಎಲ್ಲ ಸದಸ್ಯರು ಒಕ್ಕೊರಲಿನ ಸಹಮತ ವ್ಯಕ್ತಪಡಿಸಿ ಸರ್ವಾನುಮತದ ಬೆಂಬಲ ಸೂಚಿಸಿದರು.
ಇದಕ್ಕೂ ಮುನ್ನ ನಿಯಮ 69ರ ಅಡಿ ನಡೆದ ಚರ್ಚೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸದಸ್ಯರಾದ ಹೆಚ್.ಕೆ.ಪಾಟೀಲ, ಬಂಡೆಪ್ಪ ಕಾಶೆಂಪುರ, ಡಾ.ಕೆ.ಅನ್ನದಾನಿ, ಕೆ.ಎಂ. ಶಿವಲಿಂಗೇಗೌಡ, ಪ್ರಿಯಾಂಕ್ ಖರ್ಗೆ ಅವರು ಮಾತನಾಡಿದರು. ಮೀಸಲಾತಿಯು ಕೇವಲ ಸರ್ಕಾರಿ ಹುದ್ದೆಗಳಿಗೆ ಸೀಮಿತವಾಗದೇ ಖಾಸಗಿ ಕ್ಷೇತ್ರದ ಉದ್ಯೋಗಗಳು ಮತ್ತು ಸರ್ಕಾರಿ ಹೊರಗುತ್ತಿಗೆ ಹುದ್ದೆಗಳಿಗೂ ಅನ್ವಯವಾಗಬೇಕು ಎಂದು ಒತ್ತಾಯಿಸಿದರು. ಶಾಸಕರಾದ ಮಹೇಶಕುಮಾರ, ಸಿ.ಟಿ. ರವಿ ಮೊದಲಾದವರು ಈ ವೇಳೆ ಮಾತನಾಡಿದರು.
(ಓದಿ: ಮೀಸಲಾತಿ ವಿಚಾರವಾಗಿ ಸಿಎಂ ಆಣೆ ಮಾಡಿದ್ದಾರೆ: ಯತ್ನಾಳ್ )
ರಾಜ್ಯ ಸರ್ಕಾರ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಸಂಬಂಧ ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೆ ತಂದಿತ್ತು. ಆ ಬಳಿಕ ರಾಜ್ಯಪಾಲರು ಕೂಡ ಇದಕ್ಕೆ ಅಂಕಿತ ಹಾಕಿದ್ದರು. ಸದ್ಯ ಸರ್ಕಾರ ಕಾಯ್ದೆಯನ್ನು ವಿಧಾನಸಭೆಯಲ್ಲಿ ಪಾಸ್ ಮಾಡಿದೆ. ಎಸ್ಸಿಗೆ ಶೇ. 17 ಹಾಗೂ ಎಸ್ಟಿಗೆ ಶೇ.7 ಮೀಸಲಾತಿ ಹೆಚ್ಚಿಸುವ ಮೂಲಕ ರಾಜ್ಯದ ಒಟ್ಟು ಮೀಸಲಾತಿ ಶೇ.56ಕ್ಕೆ ತಲುಪಿದೆ.