ಬೆಳಗಾವಿ: ಇತ್ತೀಚೆಗೆ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಮನೆಯೊಂದು ಮೂರು ಬಾಗಿಲು ಆಗಿದ್ದು, ಅವನತಿಯ ಅಂಚಿನಲ್ಲಿದೆ ಎಂದಿದ್ದರು. ಡಿಸಿಎಂ ಸವದಿ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಎಲ್ಲ ಪಕ್ಷಗಳಲ್ಲಿ ಗುಂಪುಗಾರಿಕೆ ಇದ್ದೇ ಇರುತ್ತದೆ. ಅದೇನು ಹೊಸದಲ್ಲ, ಬಿಜೆಪಿಯಲ್ಲೂ ಮೂರು ಗುಂಪುಗಳು ಇವೆ. ದೆಹಲಿಯಲ್ಲಿ ಒಂದು ಗುಂಪು, ಕರ್ನಾಟಕದಲ್ಲಿ ಎರಡು ಗುಂಪುಗಳಿವೆ ಎಂದು ಡಿಸಿಎಂಗೆ ಟಾಂಗ್ ನೀಡಿದ್ರು. ಪಕ್ಷ ಅಂತ ಬಂದಾಗ ಎಲ್ಲರೂ ಒಗ್ಗಟ್ಟಾಗಿಯೇ ಕೆಲಸ ಮಾಡುತ್ತಾರೆ. ಈ ವಿಷಯವಾಗಿ ಮೊದಲು ಹೇಳಿದ್ದೇನೆ. ಈಗಲೂ ಹೇಳುತ್ತಿರುವೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಶಿರಾ, ಆರ್.ಆರ್. ನಗರ ಉಪಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಎರಡು ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವಿದೆ. ಶಿರಾ ಕ್ಷೇತ್ರದಲ್ಲಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಸಿಸಿ ಬ್ಯಾಂಕ್ ಚುನಾವಣೆ ವ್ಯಕ್ತಿಗತ ಅವರ ಗೌರವ, ಸ್ಥಾನದ ಮೇಲೆ ನಡೆಯುತ್ತದೆ. ಖಾನಾಪುರ ನಿರ್ದೇಶಕರ ಸ್ಥಾನ ಗೆಲ್ಲುವ ಎಲ್ಲ ಅವಕಾಶಗಳು ಇದ್ದವು. ಆದರೆ, ಕೊನೆಗಳಿಗೆಯಲ್ಲಿ ಸಮಸ್ಯೆಯಾಗಿ, ಸೋತಿದ್ದೇವೆ. ಡಿಸಿಸಿ ಬ್ಯಾಂಕ್ ರೈತರು ಇರುವಂತಹ ಬ್ಯಾಂಕ್ ಆಗಿದೆ. ಇಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಂತ ಬರುವುದಿಲ್ಲ. ಇಡೀ ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್, ಪ್ರಾಥಮಿಕ ಸಂಘಗಳಲ್ಲಿ ಎಲ್ಲ ಪಕ್ಷದವರು ಸೇರಿಕೊಂಡು ಆಡಳಿತ ನಡೆಸುತ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ ಹೊಸದನ್ನು ಏನೋ ಮಾಡಲು ಹೊರಟಿದ್ದಾರೆ. ಆದರೆ ವಿಶೇಷವೇನಿಲ್ಲ ಎಂದು ಹೇಳಿದರು.
ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಬಂಧನ ರಾಜಕೀಯವಾಗಿದೆ. ಬಿಜೆಪಿ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ. ಆದ್ರೆ, ಈಗ ಆ ವಿಚಾರವಾಗಿ ಆರೋಪ ಮಾಡುವುದರಿಂದ ಏನು ಪ್ರಯೋಜನವಿಲ್ಲ. ಕೋರ್ಟ್ ತೀರ್ಪು ಅಂತಿಮ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.