ಚಿಕ್ಕೋಡಿ/ಬೆಳಗಾವಿ: ಉತ್ತರ ಕರ್ನಾಟಕ ಅಭಿವೃದ್ಧಿಯಾಗಲು ಸುವರ್ಣಸೌಧಕ್ಕೆ ಎಲ್ಲ ಇಲಾಖೆ ಕಚೇರಿಗಳು ಸ್ಥಳಾಂತರವಾಗಬೇಕು ಎಂದು ಹೋರಾಟಗಾರ ಬಿ. ಆರ್. ಸಂಗಪ್ಪಗೋಳ ಒತ್ತಾಯಿಸಿದ್ದಾರೆ.
ಚಿಕ್ಕೋಡಿ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಈ ವಿಷಯ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಒಂದೇ ಸರ್ಕಾರಿ ಮೆಡಿಕಲ್ ಕಾಲೇಜು ಇದ್ದು, ಅದೂ ಬೆಳಗಾವಿಯಲ್ಲಿದೆ. ಇದರಿಂದ ಚಿಕ್ಕೋಡಿ ಭಾಗದ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ. ರಾಜ್ಯ ಸರ್ಕಾರ ಬರುವ ಬಜೆಟ್‍ದಲ್ಲಿ ಚಿಕ್ಕೋಡಿ ಭಾಗಕ್ಕೆ ಒಂದು ಮೆಡಿಕಲ್ ಕಾಲೇಜು, ಒಂದು ಸರ್ಕಾರಿ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಮಂಜೂರು ಮಾಡಬೇಕು ಎಂದರು.
ಬೆಳಗಾವಿ ಸುವರ್ಣಸೌಧ ಬದಿಯಲ್ಲಿ ಎಂಎಸ್ ಬಿಲ್ಡಿಂಗ್ ಕಟ್ಟಡ ನಿರ್ಮಾಣ ಮಾಡಿ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಚಿಕ್ಕೋಡಿ ಆಡಳಿತಾತ್ಮಕವಾಗಿ ಜಿಲ್ಲೆಯಾಗಬೇಕೆಂದು ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿಕೆ ನೀಡಿರುವುದು ಸಂತಸ ತಂದಿದೆ. ಆದರೆ ಅದು ಪ್ರಚಾರಕ್ಕೆ ಸೀಮಿತವಾಗದೇ ಮುಖ್ಯಮಂತ್ರಿ ಬಳಿ ಹೋಗಿ ಜಿಲ್ಲೆ ಘೋಷಣೆ ಮಾಡಬೇಕೆಂದು ಪಟ್ಟು ಹಿಡಿದು ಜಿಲ್ಲೆ ಘೋಷಣೆ ಮಾಡಬೇಕು. ಜಿಲ್ಲಾ ವಿಭಜನೆಯಲ್ಲಿ ಯಾರಾದರೂ ಅಡ್ಡಗಾಲು ಹಾಕಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡದೇ ಎಲ್ಲರೂ ಒಗ್ಗಟ್ಟಾಗಿ ಜಿಲ್ಲೆ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಹಿರಿಯ ಸಾಹಿತಿ ಎಸ್.ವೈ.ಹಂಜಿ, ತುಕರಾಮ ಕೋಳಿ, ಸುರೇಶ ಬ್ಯಾಕೂಡೆ ಉಪಸ್ಥಿತರಿದ್ದರು.