ಚಿಕ್ಕೋಡಿ: ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಇದಕ್ಕೆ ಯಾವುದೇ ತೆರನಾದ ಬಡತನ ಅಡ್ಡಿಯಾಗದು ಎಂಬುವುದನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕರಗುಪ್ಪಿ ಎಂಬ ಪುಟ್ಟ ಗ್ರಾಮದ ವಿದ್ಯಾರ್ಥಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 625 ಕ್ಕೆ 607 ಅಂಕ ಪಡೆದು ಇತರ ಬಡ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ.
ಚಿಕ್ಕೋಡಿ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಜಲಟ್ಟಿಯಲ್ಲಿ ಎಸ್ಎಸ್ಎಲ್‌ಸಿ ಓದಿದ ಐಶ್ವರ್ಯ ಅಶೋಕ್ ಪಾಟೀಲ ಬಡತನದಲ್ಲಿ ಓದಿ ಈ ಸಾಧನೆ ಮಾಡಿದ್ದಾಳೆ. ಈಗ ಈ ಸಾಧನೆಗೆ ಇಡೀ ಕುಟುಂಬವೇ ಸಂತಸ ವ್ಯಕ್ತಪಡಿಸಿದ್ದು, ಸಾಧನೆ ಮಾಡುವ ಛಲವೊಂದಿದ್ದರೆ ಏನ ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಐಶ್ವರ್ಯ ಪಾಟೀಲ ತೋರಿಸಿಕೊಟ್ಟಿದ್ದಾಳೆ.
ಮೊದಲು ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತು ಐದನೇ ತರಗತಿ ನಂತರ ಮಜಲಟ್ಟಿ ಮೂರಾರ್ಜಿ ಇಂಗ್ಲಿಷ್ ಶಾಲೆಗೆ ಆಯ್ಕೆಯಾದ ಐಶ್ವರ್ಯಾಗೆ ಮೊದ ಮೊದಲು ಇಂಗ್ಲಿಷ್ ತೊಂದರೆಯಾದರೂ ಅಲ್ಲಿನ ಶಿಕ್ಷಕರು ಹೆಚ್ಚಿನ ಕಾಳಜಿ ತೋರಿಸಿ ಇಂಗ್ಲಿಷ್ ಕಲಿಯಲು ಸಹಾಯ ಮಾಡಿದರು. ನಾನೂ ಬಡತನದಲ್ಲೂ ಈ ಸಾಧನೆ ಮಾಡಲು ಶಿಕ್ಷಕರು ಹಾಗೂ ನನ್ನ ತಂದೆ ತಾಯಿಯೇ ಕಾರಣ. ಮುಂದೆ ವೈದ್ಯಕೀಯ ಶಿಕ್ಷಣ ಪಡೆಯುವ ಇಚ್ಚೆ ಹೊಂದಿದ್ದೇನೆ. ಆದರೆ, ಈ ಬಡತನದಿಂದ ಸ್ವಲ್ಪ ಕಷ್ಟವಾಗಬಹುದು ಅದಕ್ಕಾಗಿ ಯಾರಾದರೂ ಸಹಾಯ ಹಸ್ತ ನೀಡಿದರೆ ಒಳ್ಳೆಯದು ಎಂದು ಐಶ್ವರ್ಯ ಪಾಟೀಲ ಕೋರಿದ್ದಾಳೆ.
ಮಜಲಟ್ಟಿ ಮುರಾರ್ಜಿ ದೇಸಾಯಿ ಶಾಲೆಗೆ ಆಯ್ಕೆಯಾಗಿದ್ದಕ್ಕೆ ನನ್ನ ಮಗಳು ಈ ಸಾಧನೆ ಮಾಡಲು ಸಾಧ್ಯವಾಗಿದೆ. ಒಂದು ವೇಳೆ ಮನೆಯಲ್ಲಿಯೇ ಇದ್ದು ಗ್ರಾಮದಲ್ಲಿಯೇ ಓದಿದ್ದರೆ ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಐಶ್ವರ್ಯ ತಂದೆ ಸುರೇಶ ಪಾಟೀಲ ಹೇಳುತ್ತಾರೆ.
ಏಕೆಂದರೆ ಮೊದಲೇ ಮನೆಯಲ್ಲಿ ಕಡು ಬಡತನ ಇದ್ದು, ಮನೆಯೂ ಸರಿಯಾಗಿಲ್ಲ. ಒಂದು ವೇಳೆ ಮನೆಯಲ್ಲಿಯೇ ಇದ್ದರೆ ದನಗಳ ಚಾಕರಿ, ಮೇವು ತರುವುದು, ಗದ್ದೆಗೆ ಹೋಗುವುದು ಇವೆಲ್ಲ ಕೆಲಸಗಳು ಇರುತ್ತಿದ್ದವು. ಈಗ ಎಸ್ಎಸ್ಎಲ್‌ಸಿಯಲ್ಲಿ ಹೆಚ್ಚಿನ ಅಂಕ ತೆಗೆದುಕೊಂಡಿದ್ದು ಖುಷಿಯ ಸಂಗತಿ. ಆದರೆ, ಮುಂದಿನ ಶಿಕ್ಷಣಕ್ಕೆ ನಮ್ಮ ಹತ್ತಿರ ಅಷ್ಟೊಂದು ದುಡ್ಡಿಲ್ಲ. ಅದಕ್ಕಾಗಿ ನಮಗೆ ಸಹಾಯ ಮಾಡಿ ಎಂದು ಸುರೇಶ ಪಾಟೀಲ ಕೇಳಿದ್ದಾರೆ.
ಒಟ್ಟಾರೆ ಬಡತನದಲ್ಲಿ ಹುಟ್ಟಿದರೆ ಏನೂ ಮಾಡಲು ಸಾಧ್ಯವಿಲ್ಲ ಎನ್ನುವ ಪಾಲಕರಿಗೆ, ವಿದ್ಯಾರ್ಥಿಗಳಿಗೆ ಈ ಐಶ್ವರ್ಯ ಮಾದರಿಯಾಗಿದ್ದಾಳೆ. ಐಶ್ವರ್ಯಾಳ ಮುಂದಿನ ಶಿಕ್ಷಣಕ್ಕೆ ಹಣ ಸಹಾಯದ ಅವಶ್ಯಕತೆ ಇದ್ದು, ಶಿಕ್ಷಣ ಪ್ರೇಮಿಗಳು, ದಾನಿಗಳು ಈ ಬಡ ವಿದ್ಯಾರ್ಥಿ ಐಶ್ವರ್ಯಗೆ ಸಹಾಯ ಹಸ್ತ ನೀಡಬೇಕಿದೆ.