ಬೆಳಗಾವಿ: ಬೆಳಗಾವಿಯ ಎಚ್.ಡಿ.ಕುಮಾರಸ್ವಾಮಿ ಲೇಔಟ್ನಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ಗಳ ವೈರ್ಗಳು ನೇತಾಡುತ್ತಿವೆ. ಈ ಪ್ರದೇಶದಲ್ಲಿ ಜನರು ಜೀವಭಯದಲ್ಲಿ ಸಂಚರಿಸುತ್ತಿದ್ದಾರೆ. ಅರೆಕ್ಷಣ ಯಾಮಾರಿದ್ರೂ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚು ಅನ್ನೋದು ಜನರ ಆತಂಕ.
ಇಲ್ಲಿ 15 ವಿದ್ಯುತ್ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಲಾಗಿದ್ದು, ಅವುಗಳು ನೆಲದಿಂದ ಕೇವಲ ಎರಡು ಅಡಿಯಷ್ಟು ಮಾತ್ರ ಎತ್ತರದಲ್ಲಿವೆ. ಟಿಸಿ ಬಾಕ್ಸ್ನ ಬಾಗಿಲುಗಳು ತೆರೆದುಕೊಂಡಿದ್ದು, ವೈರ್ಗಳು ನೇತಾಡುತ್ತಿವೆ. ಟಿಸಿ ಪಕ್ಕದ ಕಟ್ಟಡದಲ್ಲೇ ಅಂಗಡಿ, ಆಸ್ಪತ್ರೆಯೂ ಇದ್ದು, ನೂರಾರು ಜನ ನಿತ್ಯ ಈ ಭಾಗದಲ್ಲಿ ಓಡಾಡುತ್ತಿದ್ದಾರೆ. ಅಂಗಡಿಗೆ ಬರುವ ಚಿಕ್ಕ ಮಕ್ಕಳು ಟಿಸಿ ಪಕ್ಕದ ಖಾಲಿ ಜಾಗದಲ್ಲಿ ಆಟವಾಡುತ್ತಿರುತ್ತಾರೆ. ಈ ವೇಳೆ ಆಯತಪ್ಪಿ ಮಕ್ಕಳು ಟಿಸಿ ಸ್ಪರ್ಶಿಸಿದರೆ, ವಿದ್ಯುತ್ ತಗುಲಿ ದುರಂತ ಸಂಭವಿಸುವ ಸಾಧ್ಯತೆ ಇದೆ.
'ಈಟಿವಿ ಭಾರತ' ಜೊತೆಗೆ ಮಾತನಾಡಿದ ಸ್ಥಳೀಯ ನಿವಾಸಿಯಾಗಿರುವ ಬಾಲಕ, ''ನಾವು ನಿತ್ಯ ಶಾಲೆಗೆ ಹೋಗಲು ಇದೇ ರಸ್ತೆಯಲ್ಲೇ ಸಾಗಬೇಕಾಗುತ್ತದೆ. ಟಿಸಿಯಲ್ಲಿ ಅನೇಕ ಬಾರಿ ಬೆಂಕಿ ಕಿಡಿ ಕಾಣಿಸಿರುವುದನ್ನು ಗಮನಿಸಿದ್ದೇನೆ. ಈ ಮಾರ್ಗದಲ್ಲಿ ಸಂಚರಿಸಲು ನಮಗೆ ತುಂಬಾ ಭಯ ಆಗುತ್ತದೆ. ಆದಷ್ಟು ಬೇಗ ಟಿಸಿಯನ್ನು ಬೇರೆ ಕಡೆ ಶಿಫ್ಟ್ ಮಾಡಬೇಕು'' ಎಂದರು.
ಸ್ಥಳೀಯ ನಿವಾಸಿ ನಿಂಗಪ್ಪ ಕುರಗುಂದ ಮಾತನಾಡುತ್ತಾ, ''ಟಿಸಿ ಸ್ಥಳಾಂತರ ಮಾಡುವಂತೆ ಅನೇಕ ಬಾರಿ ಮನವಿ ಮಾಡಿಕೊಂಡರೂ ಹೆಸ್ಕಾಂ ಅಧಿಕಾರಿಗಳು ಮಾತ್ರ ಕ್ಯಾರೆನ್ನುತ್ತಿಲ್ಲ. ನಗರ ಸೇವಕರು, ಶಾಸಕರು ಯಾರೂ ಗಮನ ಹರಿಸುತ್ತಿಲ್ಲ. ಈ ಮಾರ್ಗದಲ್ಲಿ ಹೈಟೆನ್ಷನ್ ವಿದ್ಯುತ್ ವೈರ್ಗಳೂ ಇವೆ. ಏನಾದರೂ ಅನಾಹುತ ಆಗುವ ಮುಂಚೆ ಹೆಸ್ಕಾಂ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಬೇಕು" ಎಂದು ಅವರು ಒತ್ತಾಯಿಸಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಜನತಾ ದರ್ಶನ: ಅಹವಾಲು ಸಲ್ಲಿಸಲು ಆಗಮಿಸಿದ ಜನಸಮೂಹ