ಬೆಳಗಾವಿ: ಸಾಕಷ್ಟು ವಿದ್ಯಾಭ್ಯಾಸವಿದ್ದರೂ ಉದ್ಯೋಗವಿಲ್ಲದಿರುವ ಯುವಕ-ಯುವತಿಯರಿಗೆ, ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಮೇಳ ಒಂದು ಉತ್ತಮ ವೇದಿಕೆ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ಶಿವಬಸವ ನಗರದ ಎಸ್.ಜೊ. ಬಾಳೆಕುಂದ್ರಿ ಇನ್ಸ್ಟಿಟ್ಯೂಟ್ ಆಫ್ ಕಾಲೇಜ್ ಕ್ಯಾಂಪಸ್ನಲ್ಲಿ ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಶ್ರಯದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡ ಬೃಹತ್ ಪ್ರಾದೇಶಿಕ ಉದ್ಯೋಗ ಮೇಳವನ್ನು ಉದ್ಘಾಟನೆ ಬಳಿಕ ಸಚಿವರು ಮಾತನಾಡಿದರು.
ಇಂದಿನ ಉದ್ಯೋಗ ಮೇಳದಲ್ಲಿ 162 ಕಂಪನಿಗಳು ಭಾಗವಹಿಸಿವೆ. 9,500 ಉದ್ಯೋಗವಕಾಶಗಳಿವೆ. 16 ಸಾವಿರಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳು ಭಾಗವಹಿಸಿದ್ದು ಯುವಕ, ಯುವತಿಯರು ವಿವಿಧ ಕಂಪನಿಗಳು ನಡೆಸುವ ಸಂದರ್ಶನಗಳನ್ನು ಎದುರಿಸಿ ಉದ್ಯೋಗಾವಕಾಶಗಳನ್ನು ಪಡೆಯಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವಂತಾಗಬೇಕು. ಎಲ್ಲಾ ಯುವಕರು ಇದರ ಪ್ರಯೋಜನ ಪಡೆಯಬೇಕೆಂದು ಅವರು ಕರೆ ನೀಡಿದರು.
ಬೆಂಗಳೂರು ಕೇಂದ್ರಿತ ಕೈಗಾರಿಕೆಗಳು ರಾಜ್ಯದ ಎಲ್ಲಾ ಭಾಗಗಳಲ್ಲೂ ಆಗುವಲ್ಲಿ ಶ್ರಮಿಸಲಾಗುವುದು. ಕೈಗಾರಿಕೆಗಳು ಬೆಳೆದರೆ ಹೆಚ್ಚಿನ ಉದ್ಯೋಗವಾಕಾಶ ಸಿಗಲು ಸಾಧ್ಯ. ಇದಕ್ಕೂ ಮೊದಲು ಕೈಗಾರಿಕೆಗಳು ಬೆಂಗಳೂರಿಗೆ ಸೀಮಿತವಾಗಿದ್ದವು. ಅನೇಕ ವಿರೋಧದ ನಡುವೆ ಹುಬ್ಬಳ್ಳಿಯಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿ, ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಬಂಡವಾಳ ಹೂಡುವಂತೆ ಉದ್ಯಮಿಗಳಿಗೆ ಹೆಚ್ಚಿನ ರಿಯಾಯಿತಿಗಳನ್ನು ನೀಡಲಾಗಿದೆ. ಈ ಮೂಲಕ ಬಂಡವಾಳ ಹೂಡುವಂತೆ ಉದ್ಯಮಿಗಳನ್ನು ಆಕರ್ಷಿಸಲಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 72 ಸಾವಿರ ಕೋಟಿ ಬಂಡವಾಳ ಹೂಡಲು ಉದ್ಯಮಿಗಳು ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾಹಿತಿ ನೀಡಿದ್ರು.
ಇನ್ನು ಮಹದಾಯಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಉತ್ತರ ಕರ್ನಾಟಕ ಭಾಗದ ರೈತರ ನಿರಂತರ ಹೋರಾಟ ಫಲ ನೀಡಿದೆ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಕಾಳಜಿಯಿಂದಾಗಿ ಮಹದಾಯಿ ತೀರ್ಪಿನ ಗೆಜೆಟ್ ಹೊರಬಿದ್ದಿದ್ದು, ಆದಷ್ಟು ಬೇಗ ಮಹದಾಯಿಯ ನದಿಯ ನೀರು ಮಲಪ್ರಭೆಗೆ ಹರಿಯಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಂದು ಸಾವಿರ ಕೋಟಿ ಬಂಡವಾಳ ಹೂಡಲು ಹತ್ತು ಜನ ಉದ್ಯಮಿಗಳು ಒಪ್ಪಂದ ಮಾಡಿಕೊಂಡಿದ್ದಾರೆ. ಆದಷ್ಟು ಬೇಗ ಎಲ್ಲ ಅರ್ಜಿಗಳನ್ನು ಪರಶೀಲಸಿ, ಬಂಡವಾಳ ಹೂಡಲು ಎಲ್ಲ ರೀತಿಯ ಅನುಕೂಲತೆ ಕಲ್ಪಿಸಲಾಗುವುದು ಎಂದರು.