ಬೆಳಗಾವಿ: ತಾಲೂಕಿನ ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ಮಧ್ಯರಾತ್ರಿಯಲ್ಲಿಯೇ ತಾವು ಗುರುತಿಸಿದ್ದ ಸ್ಥಳದಲ್ಲೇ ರಾಯಣ್ಣನ ಮೂರ್ತಿಯನ್ನು ಮರು ಪ್ರತಿಷ್ಠಾಪನೆ ಮಾಡಿದ್ದಾರೆ.
ಹೌದು, ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಹೋರಾಟಕ್ಕೆ ಮಧ್ಯರಾತ್ರಿ ಜಯ ಸಿಕ್ಕಂತಾಗಿದೆ ಎನ್ನುತ್ತಿದ್ದಾರೆ ರಾಯಣ್ಣನ ಅಭಿಮಾನಿಗಳು. ಇನ್ನು ರಾಯಣ್ಣನ ಪರಮ ಭಕ್ತರು ಮೂರ್ತಿ ಪ್ರತಿಷ್ಠಾಪನೆ ಮಾಡಿ, ರಾಯಣ್ಣನ ಮೂರ್ತಿಗೆ ದೊಡ್ಡ ಹೂಮಾಲೆ ಹಾಕಿ ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿದ್ದಾರೆ.
ನಿನ್ನೆ ರಾತ್ರಿ ಪೀರನವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಆಗ್ರಹಿಸಿ ದೊಡ್ಡ ಹೋರಾಟವೇ ನಡೆದಿತ್ತು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಆ. 29ರಂದು ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಘೋಷಣೆ ಮಾಡಿದ್ದರು. ಆದ್ರೆ ಅದಕ್ಕೂ ಮುಂಚೆ ರಾಯಣ್ಣನ ಅಭಿಮಾನಿಗಳು ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರಿಂದ ಸ್ಥಳದಲ್ಲಿ ಮತ್ತಷ್ಟು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.