ಚಿಕ್ಕೋಡಿ: ಪ್ರವಾಹ ನಿಯಂತ್ರಣ ಬಗ್ಗೆ ಉನ್ನತಾಧಿಕಾರಿಗಳ ಜೊತೆ ಚರ್ಚೆ ನಡೆದಿದೆ. ಕಳೆದ ಬಾರಿಯ ಪ್ರವಾಹ ಈ ಸಲ ಬರುವುದಿಲ್ಲ. ಏಕೆಂದರೆ, ಕಳೆದೊಂದು ತಿಂಗಳಿನಿಂದ ನಮ್ಮ ನೀರಾವರಿ ಇಲಾಖೆ ಅಧಿಕಾರಿಗಳು ಮಹಾರಾಷ್ಟ್ರ ಸರ್ಕಾರದ ಸಂಪರ್ಕದಲ್ಲಿದ್ದಾರೆ. ಈಗಾಗಲೇ ಕೃಷ್ಣಾ ನದಿಗೆ 1,70,000 ಕ್ಯುಸೆಕ್ ಒಳ ಹರಿವಿದೆ. ಬಂದಂತಹ ನೀರನ್ನು ಆಲಮಟ್ಟಿ ಜಲಾಶಯದ ಮೂಲಕ ಬಿಡುಗಡೆ ಮಾಡುತ್ತಿದ್ದೇವೆ ಎಂದು ನೀರಾವರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನದಿ ತೀರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಬಳಿಕ ಯಡೂರ ಗ್ರಾಮದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರ ಸರ್ಕಾರ ನಮ್ಮಗೆ ಒಳ್ಳೆಯ ರೀತಿ ಸಹಕಾರ ನೀಡುತ್ತಿದೆ. ಇನ್ನೂ ಕೂಡಾ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡಿಲ್ಲ. ದೇವರ ದಯೆದಿಂದ ವೇದಗಂಗಾ, ದೂದ್‌ಗಂಗಾ ನೀರಿನ ಹರಿವು ಕಡಿಮೆಯಾದ ಬಳಿಕ ಕೊಯ್ನಾದಿಂದ ನೀರು ಬಿಟ್ಟರೆ ಪ್ರವಾಹದ ಆತಂಕ ಇರುವುದಿಲ್ಲ ಎಂದರು.
ಕೊರೊನಾ ಸಲುವಾಗಿ ಸಾಮಾಜಿಕ ಅಂತರಕ್ಕೆ ಸಮಸ್ಯೆಯಾಗಬಹುದು. ಇದಕ್ಕಾಗಿ ಗಂಜಿ ಕೇಂದ್ರಗಳನ್ನು ಹೆಚ್ಚು ಹೆಚ್ಚು ಸಿದ್ದ ಮಾಡಿ ಎಂದು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಳೆದ ಬಾರಿ ಚಿಕ್ಕೋಡಿ ಹಾಗೂ ಅಥಣಿ ತಾಲೂಕಿನ ಪ್ರವಾಹಪೀಡಿತ ಗ್ರಾಮಗಳ ಜನರಿಗೆ ಇನ್ನೂ ಪರಿಹಾರದ ಹಣ ದೊರೆತಿಲ್ಲ. ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಸಚಿವರು ಅವರು, ಕೆಲ ತಾಂತ್ರಿಕ ತೊಂದರೆಯಿಂದ ವಿಳಂಬ ಆಗಿರುವುದು ನಿಜ. ಕಳೆದ ಒಂದೂವರೆ ತಿಂಗಳ ಹಿಂದೆ ಸಚಿವ ಸೊಮಣ್ಣನವರು ಹಾಗೂ ಸಿಎಂ ಜೊತೆ ಈ ವಿಚಾರವಾಗಿ ಚರ್ಚೆ ಮಾಡಿದ್ದೇನೆ. ಈ ಬಾರಿ ಇಂತಹ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.